ಭಟ್ಕಳ: ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಹಮ್ಮಿಕೊಂಡಂತಹ ಅಕ್ಷತೆ ವಿತರಣಾ ಅಭಿಯಾನವು ಹೆಬಳೆಯಲ್ಲಿ ಶೃದ್ಧಾಭಕ್ತಿಯಿಂದ ನಡೆಯಿತು.
ಮುಂಜಾನೆಯಿಂದಲೇ ಒಟ್ಟಾದ ಶ್ರೀರಾಮಭಕ್ತರು ಹೆಬಳೆಯ ನಾಮಧಾರಿ ಸಭಾಭವನದಿಂದ ಆರಂಭಿಸಿ, ಸಂಜೆಯವರೆಗೂ ಇಲ್ಲಿನ ಪ್ರತಿ ಹಿಂದೂ ಮನೆಗಳಿಗೆ ತೆರಳಿ ಅಯೋಧ್ಯೆಯ ಅಕ್ಷತೆ ಹಂಚಿಕೆ ಜೊತೆಗೆ ಆಹ್ವಾನ ಪತ್ರಿಕೆ,ಕರಪತ್ರ ಹಾಗೂ ಭವ್ಯವಾದ ಶ್ರೀ ರಾಮಮಂದಿರದ ಫೋಟೋವನ್ನು ನೀಡಿದರು. ಪ್ರತಿ ಹಿಂದೂ ಮನೆಯ ಒಳಗಡೆ ಇರುವ ದೇವರಕೋಣೆಯ ಎದುರು ಆ ಮನೆಯ ಹಿರಿಯರು ಹಿಡಿದಿರುವ ಹರಿವಾಣದಲ್ಲಿ ಹೊದಿಸಲಾದ ಹೊಸ ಬಟ್ಟೆಯ ಮೇಲೆ ಅಕ್ಷತೆಯನ್ನು ವಿತರಿಸುತ್ತಾ ಸಾಗಿದರು. ಈ ವೇಳೆ ಜೈ ಶ್ರೀರಾಮ್…ಜೈ ಜೈ ಶ್ರೀ ರಾಮ್ ಘೋಷಣೆ ಕೇಳಿ ಬರುತ್ತಲೇ ಇದ್ದವು. ಎಲ್ಲ ಶ್ರೀ ರಾಮಭಕ್ತರೂ ಕೇಸರಿ ಶಾಲಿನ ಜೊತೆ ಶ್ವೇತವಸ್ತ್ರಧಾರಿಗಳಾಗಿದ್ದರು.
ಊರಿನ ಪ್ರತಿ ಮನೆಗಳಿಗೂ ತೆರಳಿದಾಗ ಆ ಮನೆಯವರು ಶೃದ್ಧಾಭಕ್ತಿಯಿಂದಲೇ ಶ್ರೀ ರಾಮಭಕ್ತರನ್ನು ಮನೆಯ ಒಳಗಡೆ ಬರಮಾಡಿಕೊಂಡು ತಂಪು ಪಾನೀಯ, ಹಣ್ಣು ಹಂಪಲಗಳನ್ನು ನೀಡಿ ಸತ್ಕರಿಸಿದರು.
ಈ ಅಕ್ಷತೆ ವಿತರಣಾ ಅಭಿಯಾನದಲ್ಲಿ ಹೆಬಳೆಯ ನಾಮಧಾರಿ ಸೇವಾ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಉಪಾಧ್ಷಕ್ಷ ಸುಬ್ರಾಯ ನಾಯ್ಕ, ಕಾರ್ಯದರ್ಶಿ ವಿನಾಯಕ ನಾಯ್ಕ, ಹೆಬಳೆ ಪಂಚಾಯತ್ ನ ಸದಸ್ಯರುಗಳಾದ ಈರಪ್ಪ ನಾಯ್ಕ ಮತ್ತು ರಾಮ ಹೆಬಳೆ, ರವಿ ಗೊರಟೆಕೇರಿ, ಗಣಪತಿ ಮಾವಿನಕುರ್ವೆ, ರಾಮಚಂದ್ರ ನಾಯ್ಕ, ಕುಪ್ಪ ನಾಯ್ಕ, ರಾಘು ಆರ್ಟ್ಸ್, ನಾಗೇಶ ಕೊಂಬಿಮನೆ ಮತ್ತು ಇನ್ನೂ ಅನೇಕ ಯುವಕರು ಪಾಲ್ಗೊಂಡಿದ್ದರು.