ಸಿದ್ದಾಪುರ: ಎಂಜಿಸಿ ಕಲಾ,ವಾಣಿಜ್ಯ ಹಾಗೂ ಜಿ.ಎಚ್.ಡಿ. ವಿಜ್ಞಾನ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ., ಕಸ್ತೂರಬಾ ಮಹಿಳಾ ಸಂಘ, ವಿದ್ಯಾರ್ಥಿ ಸಂಸತ್ತು, ಕಲಾ ವಿಭಾಗ ಇವುಗಳ ಸಹಯೋಗದಲ್ಲಿ ಜ.3, ಬುಧವಾರದಂದು ಬೆಳಿಗ್ಗೆ 11.00 ಗಂಟೆಗೆ ಮಹಾವಿದ್ಯಾಲಯದ ಎ.ವಿ. ಹಾಲ್ನಲ್ಲಿ 193ನೇ ಸಾವಿತ್ರಿಬಾಯಿ ಫುಲೆಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಸಿದ್ದಾಪುರದ ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಕಾಶ್ಯಪ ಪರ್ಣಕುಟಿ ಮಾತನಾಡುತ್ತಾ, ಸಾವಿತ್ರಿಬಾಯಿ ಫುಲೆಯವರು ಅಂದಿನ ಕಾಲದ ಪುರುಷ ಪ್ರಧಾನ ಸಮಾಜದ ಪ್ರಬಲ ವಿರೋಧದ ನಡುವೆ ಮಹಿಳೆಯರಿಗೆ ಅಕ್ಷರವನ್ನು ಕಲಿಸಿದ ಮಹಾಮಾತೆ. ಸ್ತ್ರೀಯರ ದಬ್ಬಾಳಿಕೆ, ಶೋಷಣೆ, ವಿಧವಾ ವಿವಾಹ ಹಾಗೂ ವಿಧವೆಯರ ಹಕ್ಕುಗಳಿಗೋಸ್ಕರ ಹೋರಾಡಿ, ತಮ್ಮ ಜೀವನವನ್ನು ಬಡವರು ಮತ್ತು ನಿರ್ಗತಿಕರಿಗಾಗಿ ಅರ್ಪಿಸಿದರು ಎಂದು ಹೇಳಿದರು.
ಪ್ರಾಚಾರ್ಯರಾದ ಡಾ.ಸುರೇಶ ಎಸ್. ಗುತ್ತಿಕರ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿ ಸಂಸತ್ತಿನ ಉಪಾಧ್ಯಕ್ಷರಾದ ಡಾ. ದೇವನಾಂಪ್ರಿಯ ಎಂ. ಇವರು ಪ್ರಾಸ್ತಾವಿಕ ಮಾತನಾಡಿದರು. ಕಸ್ತೂರಬಾ ಮಹಿಳಾ ಸಂಘದ ಸಂಚಾಲಕರಾದ ಪ್ರೊ. ಚೇತನಾ ಎಂ.ಎಚ್. ಉಪಸ್ಥಿತರಿದ್ದರು. ಕು. ಸುನೀತಾ ಗೌಡ ಮತ್ತು ಸಂಗಡಿಗರು ಮಹಿಳಾ ಧ್ಯೇಯ ಗೀತೆಯನ್ನು ಹಾಡಿದರು. ಕು. ಅನನ್ಯಾ ಗೌಡ ಸ್ವಾಗತಿಸಿದರು. ಕು. ತೇಜಸ್ವಿ ಹೆಗಡೆ ನಿರೂಪಿಸಿದರೆ, ಕು.ಚೈತ್ರಾ ಸಿ. ಪೈ ವಂದಿಸಿದರು.