ಶಿರಸಿ: ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿನ ಹೋರಾಟವು 2023ನೇ ಇಸವಿಯಲ್ಲಿ ವಿಭಿನ್ನವಾಗಿ, ಪರಿಸರ ಜಾಗೃತೆ ಹಾಗೂ ಭೂಮಿ ಹಕ್ಕಿಗೆ ಸಂಘಟನಾತ್ಮಕ ಹೋರಾಟಗಳು ಐತಿಹಾಸಿಕ ದಾಖಲಾರ್ಹ ಹೆಜ್ಜೆಗಳಾಗಿ ಗುರುತಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಉಲ್ಲೇಖಿಸಿದ್ದಾರೆ.
ಅರಣ್ಯ ಭೂಮಿ ಹಕ್ಕಿನ ಹೋರಾಟವು 2023ನೇ ಇಸವಿಯಲ್ಲಿ 33 ನೇ ವರ್ಷಕ್ಕೆ ಪಾದಾರ್ಪಣೆಗೊಂಡು, ಕಳೆದ ವರ್ಷದ ಹೋರಾಟದ ಮೇಲುಕುಗಳನ್ನ ಹಾಕುತ್ತಾ ಮೇಲಿನಂತೆ ಉಲ್ಲೇಖಿಸಿದರು. ಹೋರಾಟ ನಿರಂತರ ಜರುಗುತ್ತಿದ್ದರೂ, ಕೇಂದ್ರ ಮತ್ತು ರಾಜ್ಯ ಸರಕಾರವು ಮಂಜೂರಿ ಪ್ರಕ್ರಿಯೆಯಲ್ಲಿ ಪೂರ್ಣ ಪ್ರಮಾಣದ ಇಚ್ಛಾಶಕ್ತಿ ಪ್ರದರ್ಶಿಸುವ ದಿಶೆಯಲ್ಲಿ, ಹೋರಾಟಗಾರರ ವೇದಿಕೆಯು 2024 ರಲ್ಲಿ ಪರಿಣಾಮಕಾರವಾದ ಹೋರಾಟವನ್ನ ಮುಂದುವರೆಸಿಕೊಂಡು ಹೋಗಲಾಗುವುದೆಂದು ರವೀಂದ್ರ ನಾಯ್ಕ ಹೇಳಿದರು.
ವಿಭಿನ್ನ ಮಾದರಿಯ ಹೋರಾಟ:
ಕಳೆದ ವರ್ಷ ಹೋರಾಟದ ಪುಟದಲ್ಲಿ ಫೆ.10 ರಂದು ಐತಿಹಾಸಿಕ ಬೆಂಗಳೂರು ಚಲೋ, ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ, ಕಸ್ತೂರಿ ರಂಗನ್ ವರದಿ ವಿರೋಧ ಜಾಗೃತ ರ‍್ಯಾಲಿ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಕುರಿತು ಅರಣ್ಯ ಇಲಾಖೆಗೆ ಮುತ್ತಿಗೆ, ಶಿರಸಿ ಬಂದ್, ಪಾದಯಾತ್ರೆ, ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿನ ವೈಫಲ್ಯದ ಕುರಿತು ಸರಕಾರದೊಂದಿಗೆ ಸಮಾಲೋಚನೆ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅಸಮರ್ಪಕ ಜಿಪಿಎಸ್‌ಗೆ ಜಿಲ್ಲಾದ್ಯಂತ ಉಚಿತ ಮೇಲ್ಮನವಿ, ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ವಾದ ಮುಂದುವರಿಕೆ ಮುಂತಾದ ಪರಿಣಾಮಕಾರಿ ಐತಿಹಾಸಿಕ ಹೋರಾಟದ ಹೆಜ್ಜೆಗಳು ಇತಿಹಾಸದ ಪುಟಕ್ಕೆ ಸೇರಲ್ಪಟ್ಟಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.