ದಾಂಡೇಲಿ : ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ರಿಯಾಯಿತಿ ದರದಲ್ಲಿ ಸಾರಿಗೆ ಬಸ್ ಒದಗಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಮಾಧ್ಯಮದ ಮೂಲಕ ಶಿಕ್ಷಣ ಸಚಿವರಿಗೆ ಮತ್ತು ಸಾರಿಗೆ ಸಚಿವರಿಗೆ ಮನವಿಯನ್ನು ಮಾಡಿದ್ದಾರೆ.
ಅವರು ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಪ್ರತಿ ಕಿ.ಮೀ ಗೆ 45 ರೂ. ನಂತೆ 350 ಕಿಲೋ ಮೀಟರ್ ಗೆ ಹಣವನ್ನು ಪಾವತಿಸಬೇಕು. 100 ಕಿ.ಮೀ ಒಳಗಡೆ ಪ್ರವಾಸವಾದರೂ 350 ಕಿ.ಮೀಗೆ ಪಾವತಿಸುವಷ್ಟೆ ಹಣವನ್ನು ಪಾವತಿಸಬೇಕು. ಇದರಿಂದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲು ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಇನ್ನೂ ಪ್ರವಾಸಕ್ಕೆ ತೆರಳುವ ಬಸ್ಸುಗಳು ಹಾಳಾಗಿ ಅರ್ಧದಲ್ಲೇ ಪ್ರವಾಸವನ್ನು ಮೊಟಕುಗೊಳಿಸಬೇಕಾದ ಸ್ಥಿತಿಯು ಹಲವಾರು ಬಾರಿ ನಡೆದಿದೆ. ಇಂತಹ ಸಂದರ್ಭದಲ್ಲಿ ಪರ್ಯಾಯ ಬಸ್ಸಿನ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು.
ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಯ ಹಿನ್ನೆಲೆಯಲ್ಲಿ ಹಾಗೂ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಬಸ್ ಓಡಾಡುವ ಕಿ.ಮಿ’ ಗೆ ಅನುಗುಣವಾಗಿ ಓಡಾಡಿದ ಕಿ.ಮೀ’ ಗಷ್ಟೆ ಹಣವನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ವಿಶೇಷ ರಿಯಾಯಿತಿ ದರದಲ್ಲಿ ಸಾರಿಗೆ ಬಸ್ ಒದಗಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅಕ್ರಂ ಖಾನ್ ಅವರು ಶಿಕ್ಷಣ ಸಚಿವರಿಗೆ ಮತ್ತು ಸಾರಿಗೆ ಸಚಿವರಿಗೆ ಮನವಿಯನ್ನು ಮಾಡಿದ್ದಾರೆ.