ಯಲ್ಲಾಪುರ: ಜೀವನದಲ್ಲಿ ಶುದ್ಧತೆ, ಸಿದ್ಧತೆ ಹಾಗೂ ಬದ್ಧತೆಗಳಿದ್ದರೆ ಮಾತ್ರ ಒಳ್ಳೆಯ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯ ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅವರು ಪಟ್ಟಣದ ನಾಯಕನಕೆರೆ ದತ್ತಾತ್ರೇಯ ಮಂದಿರದಲ್ಲಿ ಮಂಗಳವಾರ ದತ್ತ ಜಯಂತಿ ಉತ್ಸವದ ಸಂದರ್ಭದಲ್ಲಿ ನೂತನ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ, ಆಶೀರ್ವಚನ ನೀಡಿದರು. ದತ್ತ ಜಯಂತಿಯ ವಿಶೇಷತೆ ದತ್ತ ಭಿಕ್ಷೆ. ದತ್ತ ಎಂದರೆ ತನ್ನನ್ನು ತಾನು ಕೊಟ್ಟುಕೊಂಡವನು ಎಂದರ್ಥ. ಭಕ್ತಿ ಹಾಗೂ ಹೃದಯಪೂರ್ವಕವಾಗಿ ಏನನ್ನಾದರೂ ಸಮರ್ಪಿಸಿ, ದತ್ತ ಭಿಕ್ಷೆಯಲ್ಲಿ ಪಾಲ್ಗೊಂಡರೆ ದತ್ತನ ಅನುಗ್ರಹ, ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದರು. ಈ ಬಾರಿಯ ದತ್ತ ಜಯಂತಿಯಲ್ಲಿ ಮಂದಿರದ ಭೂಮಿಪೂಜೆ ಆಗಿದೆ. ಮುಂದಿನ ದತ್ತ ಜಯಂತಿಯಂದು ಕಾಮಗಾರಿ ಮುಗಿದು, ಪ್ರತಿಷ್ಠಾಪನೆ ಆಗುವ ಹಾಗೆ ಕಾರ್ಯಗಳು ನಡೆಯಬೇಕು ಎಂದರು.
ಕಳೆದುಕೊಂಡ ಸಾಮ್ರಾಜ್ಯವನ್ನು ಮರಳಿ ಪಡೆಯುವುದಕ್ಕಾಗಿ ನಾವು ಇಲ್ಲಿಗೆ ಬಂದಿಲ್ಲ. ಇರುವ ಸಾಮ್ರಾಜ್ಯದ ವಿಸ್ತರಣೆಗಾಗಿಯೂ ಬಂದಿಲ್ಲ, ಹೊಸ ಸಾಮ್ರಾಜ್ಯದ ಸ್ಥಾಪನೆಗೂ ಬಂದಿಲ್ಲ. ದತ್ತನ ಸೇವೆಯ ಹೊರತಾಗಿ ಯಾವುದೇ ಅನ್ಯ ಉದ್ದೇಶವಿಲ್ಲ ಎಂದರು.
ದತ್ತ ಮಂದಿರದಲ್ಲಿ ದತ್ತಾತ್ರೇಯನಿಗೆ ಪೂಜೆ ಸಲ್ಲಿಸಿದ ಶ್ರೀಗಳು, ದೇವಸ್ಥಾನದ ಆವರದಲ್ಲಿ ದತ್ತಾತ್ರೇತನ ತೊಟ್ಟಿಲುಪೂಜೆಯಲ್ಲಿ ಪಾಲ್ಗೊಂಡರು. ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಉತ್ಸವ ಸಮಿತಿಯ ಪ್ರಮುಖರಾದ ಪ್ರಸಾದ ಹೆಗಡೆ, ಸಿ.ಜಿ.ಹೆಗಡೆ, ಶಾಂತಾರಾಮ ಹೆಗಡೆ, ಸುಧೀರ ಪೈ, ರಮೇಶ ಹೆಗಡೆ, ಶ್ರೀರಂಗ ಕಟ್ಟಿ, ಬಾಬು ಬಾಂದೇಕರ, ನಾಗರಾಜ ಮದ್ಗುಣಿ, ನಾಗೇಶ ಯಲ್ಲಾಪುರಕರ್, ಅನಂತ ಬಾಂದೇಕರ್ ಇತರರಿದ್ದರು.