ಯಲ್ಲಾಪುರ: ವಿಜ್ಞಾನದ ಸಂವಹನವನ್ನು ಪರಿಣಾಮಕಾರಿಯಾಗಿ ವರ್ಗ ಕೋಣೆಯಲ್ಲಿ ತಲುಪಿಸುವುದೇ ವಿಜ್ಞಾನ ಶಿಕ್ಷಕರ ಆದ್ಯ ಕರ್ತವ್ಯ ಎಂದು ಉಪನಿರ್ದೇಶಕರ ಕಚೇರಿಯ ವಿಜ್ಞಾನ ಪರಿವೀಕ್ಷಕ ಎಂ.ಕೆ. ಮೊಗೇರ ಹೇಳಿದರು.
ಅವರು ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು ಹಾಗೂ ವಿಕಾಸನ ಕೇಂದ್ರ ಬೆಳಗಾವಿ, ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಯಲ್ಲಾಪುರದ ವಿಜ್ಞಾನ ಬಳಗ ವಿಜ್ಞಾನ ಶಿಕ್ಷಕರಿಗಾಗಿ ಕಡಿಮೆ ವೆಚ್ಚದ ಶಿಕ್ಷಣ ಪರಿಕರಗಳ ತಯಾರಿಕೆ ಮೂಲಕ ವಿಜ್ಞಾನ ಸಂವಹನದ ಕುರಿತು ಆಯೋಜಿಸಿರುವ ಮೂರು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೇವಲ ಉದ್ಯೋಗಕ್ಕಾಗಿ ವಿಜ್ಞಾನ ಅಧ್ಯಯನ ಮಾಡದೇ ಮೂಲ ವಿಜ್ಞಾನವನ್ನು ಅಧ್ಯಯನ ಮಾಡುವ ಪ್ರವೃತಿ ಬೆಳೆಯಬೇಕು. ವಿಜ್ಞಾನದ ಮೂಲ ತತ್ವಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ ಎಂದರು. ಯಲ್ಲಾಪುರ ವಿಜ್ಞಾನ ಬಳಗದ ಅಧ್ಯಕ್ಷ ಸಂತೋಷ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಡಯಟ್ ಪ್ರಾಂಶುಪಾಲ ಎಂ.ಎಸ್. ಹೆಗಡೆ, ವಿಷಯ ಪರಿವೀಕ್ಷಕ ಗೋಪಾಲ್ ಹೆಗಡೆ, ಡಯಟ್ ಉಪನ್ಯಾಸಕ ಪ್ರಶಾಂತ್ ವರ್ಣೇಕರ್, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಜಯ ನಾಯಕ, ಮುಖ್ಯಾಧ್ಯಾಪಕಿ ತನುಜಾ ನಾಯ್ಕ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಮೀಸಾಳೆ, ಕಾರ್ಯಕ್ರಮದ ಸಂಯೋಜಕ ಸಂಜಯ್ ಮುಗುದುಂ ಬೆಳಗಾವಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕ ಎಂ ರಾಜಶೇಖರ, ಶಿಕ್ಷಕ ಗಜಾನಂದ ಭಟ್, ಸದಾನಂದ ದಬಗಾರ್, ಸರೋಜ ನಿರ್ವಹಿಸಿದರು.
ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲೂಕುಗಳ ಸುಮಾರು 80ಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು. ಮೂರು ದಿನಗಳ ಕಾಲ ಸುಮಾರು 30ಕ್ಕೂ ಹೆಚ್ಚು ಪ್ರಯೋಗಗಳ ತರಬೇತಿಗಳನ್ನು ಕಾರ್ಯಾಗಾರದಲ್ಲಿ ನೀಡಲಾಗುತ್ತಿದೆ.