ಜೋಯಿಡಾ : ತಾಲೂಕಿನ ಪಣಸೋಲಿ ಆನೆ ಶಿಬಿರವು ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಆನೆ ಶಿಬಿರವಾಗಿದ್ದು, ಇದು ದಾಂಡೇಲಿಯಿಂದ 12 ಕಿಮೀ ದೂರದಲ್ಲಿದೆ. ಈ ಆನೆ ಶಿಬಿರವು ಪ್ರವಾಸಿಗರ ಕಣ್ಮನ ಸೆಳೆದರೆ, ಆನೆಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಅಧ್ಯಯನ ಕೇಂದ್ರವಾಗುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ.
ಇಲ್ಲಿ ಆನೆಗಳಿಗೆ ಆಶ್ರಯದ ಜೊತೆಗೆ ಅರಣ್ಯದಲ್ಲಿ ವಾಸಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಪರಿಸರ ಪ್ರವಾಸೋದ್ಯಮ ಕೇಂದ್ರವು ಈ ಆನೆಗಳಿಗೆ ಸಾಧ್ಯವಿರುವ ಎಲ್ಲ ರೀತಿಯ ಆರೈಕೆಯನ್ನು ಒದಗಿಸುತ್ತಿದೆ. ಸದ್ಯ ಶಿಬಿರದಲ್ಲಿ ನಾಲ್ಕು ಹೆಣ್ಣಾನೆಗಳಿವೆ. 28 ವರ್ಷದ ಚಾಮುಂಡಿ ಮತ್ತು ಈಕೆಯ ಮಕ್ಕಳಾದ 8 ವರ್ಷದ ಶಿವಾನಿ ಹಾಗೂ 7 ತಿಂಗಳ ಹಸುಗೂಸು ಮುದ್ದು ಗೌರಿಯ ಜೊತೆಗೆ 35 ರ ಪ್ರಾಯದ ಚಂಚಲ ಆನೆಯು ಶಿಬಿರದಲ್ಲಿ ಆಶ್ರಯ ಪಡೆದಿವೆ. ಗೌರಿ ಆನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಶಿಬಿರದಲ್ಲಿನ ಅನುಭವಗಳು:
ಪಣಸೋಲಿ ಆನೆ ಶಿಬಿರದಲ್ಲಿ ಪ್ರವಾಸಿಗರು ಭೇಟಿ ನೀಡಲು ಹಲವಾರು ಕಾರಣಗಳಿವೆ ಏಕೆಂದರೆ ಶಿಬಿರವು ಮೃಗಾಲಯವಲ್ಲ. ಇಲ್ಲಿ ನೀವು ಆನೆಗಳನ್ನು ವೀಕ್ಷಿಸಬಹುದು. ಅದರೊಂದಿಗೆ ಫೊಟೊ ತೆಗೆಸಿಕೊಳ್ಳಬಹುದು. ಜೊತೆಗೆ ಆನೆಗೆ ಸ್ನಾನ ಮಾಡಿಸುವುದನ್ನು ಮತ್ತು ಅದಕ್ಕೆ ಆಹಾರ ನೀಡುತ್ತಿರುವುದನ್ನು ಕಾಣಬಹುದು. ಒಟ್ಟಿನಲ್ಲಿ ಆನೆಗಳೊಂದಿಗೆ ಸಮಯವನ್ನು ಆಹ್ಲಾದಕರವಾಗಿ ಕಳೆಯಬಹುದು. ಇದು ತರಬೇತಿ ಶಿಬಿರವಾಗಿದ್ದು, ತರಬೇತಿ ಪಡೆದ ಮಾವುತರು ಆನೆಗಳನ್ನು ನೋಡಿಕೊಳ್ಳುತ್ತಾರೆ.
ವೀಕ್ಷಣೆ:
ಕಲಿಕೆಯ ಅತ್ಯುತ್ತಮ ಮಾರ್ಗವೆಂದರೆ ವೀಕ್ಷಣೆ. ಆನೆಗಳು ಹೇಗೆ ವರ್ತಿಸುತ್ತವೆ, ಆಹಾರವನ್ನು ತಿನ್ನುತ್ತವೆ, ಅವುಗಳ ಮನಸ್ಥಿತಿಗಳು ಮತ್ತು ಇತರ ನಡವಳಿಕೆಯ ಮಾದರಿಗಳನ್ನು ವೀಕ್ಷಿಸಲು ಶಿಬಿರದಲ್ಲಿ ಸ್ವಲ್ಪ ಸಮಯವನ್ನು ಕಳೆದಾಗ ಅರಿವಿಗೆ ಬರುತ್ತದೆ. ಆನೆಗಳನ್ನು ಪ್ರತಿದಿನ ಬೆಳಿಗ್ಗೆ 8.30 ರಿಂದ 10 ರವರೆಗೆ ಹಾಗೂ ಸಂಜೆ 4 ರಿಂದ 6 ವರೆಗೆ ಶಿಬಿರಕ್ಕೆ ತರಲಾಗುತ್ತದೆ. ಈ ಸಮಯದಲ್ಲಿ ಆನೆಗಳು ಮತ್ತು ಅದರ ಸ್ವಭಾವದ ಕುರಿತು ಸಂಪೂರ್ಣವಾಗಿ ವೀಕ್ಷಿಸಬಹುದು.
ತರಬೇತಿ ಪಡೆದ ಮಾವುತರು ಆನೆಗಳಿಗೆ ಸ್ನಾನವನ್ನು ಹೇಗೆ ಮಾಡಿಸುತ್ತಾರೆ ಎಂಬುದು ನೋಡುವುದೇ ಒಂದು ಆನಂದ. ಶಿಬಿರದಲ್ಲಿ ಆನೆಗಳಿಗೆ ಕಾಡಿನಲ್ಲಿರುವ ಕೊಳದಲ್ಲಿ ಎರಡು ದಿನಕೊಮ್ಮೆ ಸ್ನಾನವನ್ನು ಮಾಡಿಸಲಾಗುತ್ತದೆ. ಆನೆ ಶಿಬಿರದ ಹತ್ತಿರ ನೀರಿನಲ್ಲಿ ಆಟವಾಡಲು ಅರಣ್ಯ ಇಲಾಖೆಯಿಂದ ನೀರಿನ ಟ್ಯಾಂಕನ್ನು ನಿರ್ಮಿಸಲಾಗಿದೆ.
ಇಲ್ಲಿ ಆನೆಗಳಿಗೆ ಬೆಳಗಿನ ಉಪಹಾರವನ್ನು ಶಿಬಿರದಲ್ಲಿಯೇ ತಯಾರಿಸಲಾಗುತ್ತದೆ. ಮಾವುತರು ಮತ್ತು ಅವರ ಸಹಾಯಕರು ಆನೆಗಳಿಗೆ ಆಹಾರವನ್ನು ನೀಡುತ್ತಾರೆ.
ಒಟ್ಟಿನಲ್ಲಿ ವನ್ಯಜೀವಿ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವ್ಯವಸ್ಥಿತ ಕಾರ್ಯನಿರ್ವಹಣೆಯಿಂದಾಗಿ ಮತ್ತಿ ಮಾವುತರು ಆನೆಗಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಿರುವುದೇ ಈ ಆನೆ ಶಿಬಿರ ಪ್ರಸಿದ್ಧಿಯನ್ನು ಪಡೆಯಲು ಸಾಧ್ಯವಾಗಿದೆ.