ಹೊನ್ನಾವರ: ತಾಲೂಕಿನ ಪಟ್ಟಣದ ವ್ಯಾಪ್ತಿಯಲ್ಲಿರುವ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಸ್ಕೂಲ್ ನಲ್ಲಿ ನರ್ಸರಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು. ಪಾಲಕರು , ಪೋಷಕರುಗಳಿಂದ ತುಂಬಿದ್ದ ಸಭಾಂಗಣದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿದ್ಯುತ್ ನಿಗಮದ ಮೆಸ್ಕಾಂ ವಿಭಾಗದ ನಿವೃತ್ತ ಸೂಪರಿಂಟೆಂಡೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ನರಸಿಂಹ ಪಂಡಿತ್ ನೆರವೇರಿಸಿದರು. ನಂತರ ಮಾತನಾಡಿದ ಡಾ. ನರಸಿಂಹ ಪಂಡಿತ್ ಸಾಂಸ್ಕೃತಿಕ ಕಾರ್ಯಕ್ರಮ ಎಂದರೆ ತುಂಬಾ ಇಷ್ಟಪಡುತ್ತೇನೆ. ನಾನು ಸ್ವಲ್ಪ ಮಟ್ಟಿಗೆ ಬರವಣಿಗೆಯನ್ನು ಕಲಿತಿದ್ದರೆ ಅದು ಎಸ್.ಡಿ.ಎಂ.ಕಾಲೇಜಿನ ಉಪನ್ಯಾಸಕರುಗಳಿಂದ. ಆಕಾಶವಾಣಿಯ ಕಲಾವಿದನಾಗಿಯೂ ಕೆಲಸವನ್ನು ಮಾಡಿದ್ದೇನೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಪಾಲಕರು , ಶಿಕ್ಷಕರು ಹೆಚ್ಚಿನ ಸಹಕಾರವನ್ನು ನೀಡಬೇಕು. ಊಟವನ್ನು ಮಾಡುವಾಗ ಹೇಗೆ ರುಚಿಯನ್ನು ಬಯಸುತ್ತೇವೆಯೋ ಹಾಗೆ ಓದಿದ್ದು ರುಚಿಸಬೇಕು ಎಂದರೆ ಇತರೆ ಒಳ್ಳೆಯ ಹವ್ಯಾಸಗಳು ಬೇಕು. ಓದುವಿಕೆಯಲ್ಲಿ ತೊಡಗಿಸಿಕೊಳ್ಳುವುದು ಎಂದರೆ ತಪಸ್ಸು ಮಾಡಿದಂತೆ ಇರಬೇಕು. ವಿದ್ಯಾರ್ಥಿಗಳ ಪ್ರತಿಭೆಗಳು ಹೊರಜಗತ್ತಿಗೆ ಬರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಡಾ. ನರಸಿಂಹ ಪಂಡಿತ್ ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ನಮ್ಮ ಕಾಲೇಜಿನ ಪೂರ್ವ ವಿದ್ಯಾರ್ಥಿ. ಈಗಿರುವ ನಮ್ಮ ವಿದ್ಯಾರ್ಥಿಗಳಿಗೆ ಇವರು ಮಾದರಿ. ಇಂತಹ ಕಾರ್ಯಕ್ರಮಗಳನ್ನು ಮಾಡುವುದೇ ವಿದ್ಯಾರ್ಥಿಗಳು ನಮ್ಮ ಅತಿಥಿಗಳಾಗಿ ಬರುವುವರಿಂದ ಪ್ರೇರೇಪಣೆಗೊಳ್ಳಬೇಕು ಎಂದು. ವಿದ್ಯಾಸಂಸ್ಥೆಯ ರಥ ಮುನ್ನಡೆಯಲು ಆಡಳಿತ ಮಂಡಳಿ,ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಎಂಬ ನಾಲ್ಕು ಗಾಲಿಗಳು ಬೇಕು. ಇದರಲ್ಲಿ ಯಾವುದೋ ಒಂದು ಚಕ್ರ ಸರಿಯಿಲ್ಲ ಎಂದರೂ ರಥ ಸರಿಯಾಗಿ ಚಲಿಸುವುದಿಲ್ಲ. ನಾಲ್ವರು ಕೈ ಜೋಡಿಸಿದರೆ, ಸಾಮರಸ್ಯ ಇದ್ದರೆ ಉತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡಲು ಸಾಧ್ಯ ಎಂದು ನುಡಿದರು.
ಎಂ.ಪಿ.ಇ.ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್ , ಖಜಾಂಚಿ ಉಮೇಶ್ ನಾಯ್ಕ ಹಾಗೂ ಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಅನ್ವಿತಾ ನಾಯ್ಕ, ವೇದಿಕೆ ಮೇಲೆ ಹಾಜರಿದ್ದರು. ಶಾಲೆಯ ಪ್ರಾಚಾರ್ಯ ಶ್ರೀಮತಿ ಕಾಂತಿ ಭಟ್ಟ ಸರ್ವರನ್ನು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಹನಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಸುಶ್ಮಾ ನಾಯ್ಕ ವಂದಿಸಿದರು.