ದಾಂಡೇಲಿ : ನಗರಸಭೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯ ಲೋಕಾರ್ಪಣೆಯು ಜನವರಿ. 26 ರ ಗಣರಾಜ್ಯೋತ್ಸವದಂದು ನಡೆಯಲಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಆದಿಜಾಂಬವಂತ ಸಂಘದ ಅಧ್ಯಕ್ಷರಾದ ಚಂದ್ರಕಾಂತ ನಡಿಗೇರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಗುರುವಾರ ನಗರದ ಹಳೆ ನಗರ ಆದಿಜಾಂಬವಂತ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಕುರಿತಂತೆ ಆದಿಜಾಂಬವಂತ ಸಂಘ ಹಾಗೂ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯು ಈ ಬಗ್ಗೆ ಲಿಖಿತ ಮನವಿ ಸೇರಿದಂತೆ ಹೋರಾಟವನ್ನು ಮಾಡಿರುತ್ತದೆ. ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಸ್ವತಃ ಆಸಕ್ತಿ ವಹಿಸಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸಿ ಜನವರಿ :26ರಂದು ಲೋಕಾರ್ಪಣೆ ಮಾಡಲು ಈಗಾಗಲೆ ನಗರ ಸಭೆಗೆ ಸೂಚನೆಯನ್ನು ನೀಡಿರುವುದು ಸ್ವಾಗತಾರ್ಹವಾಗಿದೆ. ಪುತ್ಥಳಿ ನಿರ್ಮಾಣದ ಕುರಿತಂತೆ ಪೌರಾಯುಕ್ತರು ಹಾಗೂ ನಗರಸಭೆಯ ಸರ್ವ ಸದಸ್ಯರು ವಿಶೇಷ ಮುತುವರ್ಜಿಯನ್ನು ವಹಿಸಿರುವುದು ಅಭಿನಂದನೀಯವಾಗಿದೆ ಎಂದು ಚಂದ್ರಕಾಂತ ನಡಿಗೇರ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆದಿಜಾಂಬವಂತ ಸಂಘ ಹಾಗೂ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.