ಕಾರವಾರ: ನಗರದ ಹೃದಯ ಭಾಗದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ (ಕನ್ನಡ ಮತ್ತು ಆಂಗ್ಲಮಾದ್ಯಮ) ಶಾಲೆಯು ೧೨೦ ವಿದ್ಯಾರ್ಥಿಗಳನ್ನು ಹೊಂದಿದ್ದು ಮೂಲಭೂತ ಸೌಕರ್ಯಗಳಿಲ್ಲದೇ ನಲುಗುತ್ತಿದೆ ಎಂದು ಶಾಲೆಯ ಎಸ್.ಡಿ.ಎಮ್.ಸಿ. ಸದಸ್ಯರು ಹಾಗೂ ಪಾಲಕ/ಪೋಷಕರು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ಮನವಿ ನೀಡಿದರು.
ಶಾಲೆಯ ಜಾಗದ ತಕರಾರು ಅರ್ಜಿ ಹೈಕೋರ್ಟ್ ಪೀಠದ ಮುಂದೆ ಅಂತಿಮ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಯಾವುದೇ ಮೂಲಭೂತ ಅಗತ್ಯಗಳನ್ನು ಇಲಾಖೆಯಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು. ಖಾಯಂ ಇಂಗ್ಲೀಷ ಶಿಕ್ಷಕರ ನೇಮಕ (ಇಂಗ್ಲೀಷ್ ಮಾಧ್ಯಮ), ಶಾಲೆಯ ಮುಂಭಾಗದ ಆವಾರ ಗೋಡೆ ನಿರ್ಮಾಣ, ಅಕ್ಷರ ದಾಸೋಹಕ್ಕೆ ಹೊಸ ಕಟ್ಟಡ ವ್ಯವಸ್ಥೆ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದರು.
ನೂತನ ಕೊಠಡಿಗಳ ವ್ಯವಸ್ಥೆ, ಶಾಲೆಯ ಪ್ರವೇಶದ್ವಾರದ ಮುಂದೆ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತಿರುಗಾಡಲು ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ಎರಡು ಬ್ಯಾರಿಕೇಡ್ಗಳನ್ನು ಅಳವಡಿಸಿ ಸುಗಮ ಸಂಚಾರ ವ್ಯವಸ್ಥೆ ಮಾಡಿಕೊಡಬೇಕು. ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಈ ಮೂಲಭೂತ ಅವಶ್ಯಕತೆಗಳನ್ನು ಕೂಡಲೇ ಪೂರೈಸಿಕೊಡಬೇಕಾಗಿ ಎಸ್.ಡಿ.ಎಮ್.ಸಿ. ಅಧ್ಯಕ್ಷ ನಾಗೇಂದ್ರ ನಾಯಕ ಮುಂದಾಳತ್ವದಲ್ಲಿ ಎಲ್ಲಾ ಸದಸ್ಯರು, ಪಾಲಕರು/ಪೋಷಕರು ವಿನಂತಿಸಿದರು.