ಶಿರಸಿ: ಇಲ್ಲಿನ ಪ್ರತಿಷ್ಠಿತ ಶಿರಸಿ ಲಯನ್ಸ್ ಎಜುಕೇಷನ್ ಸೊಸೈಟಿಯಲ್ಲಿ ಕಳೆದ ಮೂರು ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಲಯನ್ ಪ್ರೊ. ಎನ್.ವಿ.ಜಿ.ಭಟ್ ನಿಧನದ ಕಾರಣ ತೆರವಾಗಿರುವ ಆಡಳಿತ ಮಂಡಳಿ ಸದಸ್ಯರ ಹುದ್ದೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಆಡಳಿತ ಮಂಡಳಿಯ ಕಾರ್ಯಕಾರಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಇಲ್ಲಿಯವರೆಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಲಯನ್ ಪ್ರಭಾಕರ ಹೆಗಡೆ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೋರ್ವ ಹಿರಿಯ ಲಯನ್ ಸದಸ್ಯರಾದ ಲಯನ್ ಕೆ.ಬಿ.ಲೋಕೇಶ ಹೆಗಡೆ ಆಯ್ಕೆಯಾದರು. ನೂತನ ಸದಸ್ಯರಾಗಿ ಹಿರಿಯ ಲಯನ್ಸ ಸದಸ್ಯರಾದ ಲಯನ್ ಚಂದ್ರಶೇಖರ ಹೆಗಡೆ ಆಯ್ಕೆಯಾದರು. ಉಳಿದ ಆಡಳಿತ ಮಂಡಳಿ ಕಾರ್ಯಕಾರಿ ಸದಸ್ಯರು ಹಿಂದಿನಂತೆ ಮುಂದುವರೆದಿದ್ದು, ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಕೋರಿದರು.