ದಾಂಡೇಲಿ: ರಾಜ್ಯದ ವಕೀಲರ ಹಲವು ವರ್ಷಗಳ ಹೋರಾಟ ಈಗ ಫಲ ಕೊಟ್ಟಿದೆ. ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯಿದೆಯು ರಾಜ್ಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರವಾಗಿದೆ. ಈ ವಿಧೇಯಕಕ್ಕಾಗಿ ರಾಜ್ಯಾದ್ಯಂತ ನಿರಂತರ ಹೋರಾಟ ನಡೆದ ಪರಿಣಾಮವಾಗಿ ಇದೀಗ ರಾಜ್ಯ ಸರ್ಕಾರ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮತ್ತು ಅಂಗೀಕರಿಸುವ ಕ್ರಮಕ್ಕೆ ಮುಂದಾಗಿದ್ದು, ವಕೀಲರ ವೃತ್ತಿಗೆ ಸೂಕ್ತ ರಕ್ಷಣಾ ಕವಚ ಎಂದು ಭಾವಿಸಬಹುದಾಗಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟ ರಾಜ್ಯ ಸಮಿತಿ ಸದಸ್ಯೆ ರತ್ನದೀಪ ಎನ್.ಎಂ ಹರ್ಷ ವ್ಯಕ್ತಪಡಿಸಿದ್ದಾರೆ.
ವಕೀಲರ ಸಂರಕ್ಷಣಾ ಕಾಯಿದೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ, ಕಾನೂನು ಸಚಿವರಿಗೆ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಬೆಂಬಲಿಸಿದ ರಾಜ್ಯದ ಎಲ್ಲಾ ಸಮಸ್ತ ವಕೀಲರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸರ್ಕಾರ ಕ್ರಮ ಸ್ವಾಗತಾರ್ಹವಾಗಿದೆ, ಆದರೆ ವಿಧೇಯಕ ಮಂಡನೆ ಮತ್ತು ಅಂಗೀಕಾರಕ್ಕೆ ಸೀಮಿತಗೊಳಿಸದೇ, ತ್ವರಿತ ಗತಿಯಲ್ಲಿ ಇಡೀ ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲು ಅಖಿಲ ಭಾರತ ವಕೀಲರ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದು ರತ್ನದೀಪ.ಎನ್.ಎಂ ಅವರು ತಿಳಿಸಿದ್ದಾರೆ.