ಶಿರಸಿ: ತಾಲೂಕಿನ ಹುಲೇಕಲ್ ಮಾರ್ಗದ ಕಲಗಾರ ಒಡ್ಡು ಬಳಿಯ ಹುಲಿದೇವರ ಕಟ್ಟೆಯಲ್ಲಿ ಕಾರ್ತಿಕ ಅಮವಾಸ್ಯೆ ಪ್ರಯುಕ್ತ ಬುಧವಾರ ಕಾರ್ತಿಕೋತ್ಸವ ಸಹಸ್ರಾರು ಭಕ್ತರ ನಡುವೆ ಅತ್ಯಂತ ಭಕ್ತಿ, ಸಡಗರದಿಂದ ನಡೆಯಿತು.
ಸುತ್ತಮುತ್ತಲಿನ ಗ್ರಾಮಸ್ಥರಲ್ಲದೇ ತಾಲೂಕು, ಹೊರ ತಾಲೂಕುಗಳ ಸುಮಾರು 8 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರಲ್ಲದೇ ಹಣ್ಣುಕಾಯಿ ಸಮರ್ಪಿಸಿ, ಪುನೀತರಾದರು. ಮುಂಜಾನೆ 5 ಗಂಟೆಯಿಂದಲೇ ಭಕ್ತರು ಶ್ರೀ ಹುಲಿದೇವರ ಸನ್ನಿಧಿಗೆ ಆಗಮಿಸಿ ಹರಕೆ ಸಲ್ಲಿಸಿದರು. ಮಧ್ಯಾಹ್ನದ ಹೊತ್ತಿಗೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಮೂಲ ದೇವಸ್ಥಾನ ತೈಲಗಾರದಲ್ಲಿ ಮಂಗಳವಾರ ರಾತ್ರಿ ಪೂಜೆ, ದೀಪೋತ್ಸವ ನಡೆಸಲಾಯಿತು.
ನಂತರ ಅಲ್ಲಿಂದ ಬುಧವಾರ ಮುಂಜಾನೆ 3 ಗಂಟೆಗೆ ಸಾಲಿಗ್ರಾಮವನ್ನು ಹುಲಿಯಪ್ಪ ಕಟ್ಟೆಗೆ ತಂದು ಪೂಜೆ, ದರ್ಶನ ಆರಂಭಿಸಲಾಯಿತು. ವಾರ್ಷಿಕವಾಗಿ ಹುಲಿಯಪ್ಪನ ಕಟ್ಟೆಯಲ್ಲಿ ಐದು ಪೂಜೆ ನಡೆಯುತ್ತದೆ. ಅದರಲ್ಲಿ ಕಾರ್ತಿಕ ಅವಮವಾಸ್ಯೆಗೆ ಹುಲಿದೇವರ ಕಟ್ಟೆಯಲ್ಲಿ ನಡೆಯುವ ಕಾರ್ತಿಕೋತ್ಸವ ವಿಶೇಷವಾಗಿದೆ.
ಹುಲೇಕಲ್ ಮಾರ್ಗದ ಮುಖ್ಯರಸ್ತೆಯಂಚಿನಲ್ಲೇ ಇರುವ ಹುಲಿದೇವರ ಕಟ್ಟೆಗೆ ಸಹಸ್ರಾರು ಭಕ್ತರು ಸರತಿಯ ಸಾಲಿನಲ್ಲಿ ತೆರಳಿ ದರ್ಶನ ಪಡೆದರು. ಇಡೀ ಪ್ರದೇಶ ಬೆಳಗ್ಗೆಯಿಂದ ಸಂಜೆವರೆಗೂ ಜಾತ್ರೆಯಂತೆ ಕಂಡುಬಂತು. ರಸ್ತೆಯಂಚಿನಲ್ಲಿ ಹಾಕಲಾಗಿದ್ದ ಅಂಗಡಿಗಳಲ್ಲಿ ಖರೀದಿಯೂ ಜೋರಾಗಿತ್ತು.
ಹುಲಿದೇವರ ದೇವಸ್ಥಾನ ಸಮಿತಿಯ ಈಶ್ವರ ನಾಯ್ಕ, ನಾರಾಯಣ ನಾಯ್ಕ, ಕೆರಿಯಾ ಗೌಡ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಈ ಕಲಗಾರ ಕಟ್ಟೆಯಲ್ಲಿ ಅನಾದಿ ಕಾಲದಿಂದಲೂ ಕಾರ್ತಿಕೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ರೈತರು ಹಾಗೂ ಇನ್ನಿತರ ಸಾರ್ವಜನಿಕರು ಬೆಳೆ, ಸಾಕು ಪ್ರಾಣಿಗಳ ರಕ್ಷಣೆ ಸೇರಿದಂತೆ ಇಷ್ಟಾರ್ಥ ಸಿದ್ಧಿಗೆ ಮೊರೆ ಇಡುತ್ತಾರೆ. ಜಾನುವಾರುಗಳ ಪ್ರತಿ ಬಾಲಕ್ಕೆ ಒಂದು ಕಾಯಿ ಒಡೆಯುವ ಪದ್ಧತಿಯೂ ಇದೆ.
- ಚಂದ್ರಶೇಖರ ಹೂಡ್ಲಮನೆ (ಮೊಕ್ತೇಸರ)
ಟ್ರಾಪಿಕ್ ಸಮಸ್ಯೆಗೆ ಪರಿಹಾರ ಒದಗಿಸಿ:
ಹುಲೇಕಲ್ ಮಾರ್ಗದ ಮುಖ್ಯ ರಸ್ತೆಯಂಚಿನಲ್ಲೇ ಇರುವ ಈ ಹುಲಿದೇವರ ಕಟ್ಟೆಗೆ ಸಹಸ್ರಾರು ಭಕ್ತರು ತಮ್ಮತಮ್ಮ ವಾಹನಗಳ ಮೂಲಕ ಆಗಮಿಸುತ್ತಾರೆ. ರಸ್ತೆ ಬದಿಯಲ್ಲೇ ಅಂಗಡಿಗಳನ್ನೂ ಹಾಕಿರುತ್ತಾರೆ. ಇದರಿಂದ ರಸ್ತೆಯಲ್ಲಿ ಜನದಟ್ಟನೆ ಉಂಟಾಗುತ್ತದೆ. ವಾಹನ ನಿಲುಗಡೆಗೂ ಸೂಕ್ತ ಸ್ಥಳಾವಕಾಶವಿಲ್ಲ. ಇದರಿಂದ ಟ್ರಾಪಿಕ್ ಜಾಮ್ ಸಮಸ್ಯೆ ಉಂಟಾಗುತ್ತದೆ. ಸಂಬಂಧಿಸಿದ ಇಲಾಖೆ ಈ ಬಗ್ಗೆ ಸೂಕ್ತ ಗಮನಹರಿಸಿ, ಪರಿಹಾರ ಒದಗಿಸಬೇಕು ಎನ್ನುತ್ತಾರೆ ಹುಲಿದೇವರ ಭಕ್ತರು.