ಭಟ್ಕಳ: ತಾಲೂಕಿನ ಪುರಾಣಪ್ರಸಿದ್ಧ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಇಪ್ಪತ್ನಾಲ್ಕನೆಯ ವರ್ಷದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಸಡಗರದಿಂದ ಅತ್ಯಂತ ಭಕ್ತಿಪೂರ್ವಕವಾಗಿ ನಡೆಯಿತು.
ಮುಂಜಾನೆಯಿಂದಲೇ ಸಾವಿರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬಂದು ದೇವರ ದರ್ಶನವನ್ನು ಪಡೆದು ಪೂಜಾ ಸೇವೆಗಳಲ್ಲಿ ಪಾಲ್ಗೊಂಡರು. ಶ್ರೀ ಕ್ಷೇತ್ರದ ಮುಖ್ಯ ದೇವರುಗಳಾದ ಜಟಕಾ, ಮಹಾಸತಿ, ಪ್ರಧಾನ ಹಾಗೂ ಬ್ರಹ್ಮ ದೇವರುಗಳಿಗೆ ಹೂವಿನಿಂದ ಅಲಂಕೃತಗೊಳಿಸಿದ್ದಲ್ಲದೇ, ಚಿನ್ನ ಹಾಗೂ ಬೆಳ್ಳಿಯ ಒಡವೆಗಳನ್ನು ಧಾರಣೆ ಮಾಡಲಾಗಿತ್ತು. ಪ್ರಮುಖ ದೇವರುಗಳ ಜೊತೆಗೆ ಪರಿವಾರ ದೇವರುಗಳಿಗೆ ಶ್ರೀಕ್ಷೇತ್ರದ ಪದ್ಧತಿಯಂತೆ ಮೊದಲು ಧೂಪನೆಣೆಯ ಪೂಜಾ ಸೇವೆ ಮಾಡಿ ಮಧ್ಯಾಹ್ನದ ಮಹಾಪೂಜೆ ನೆರವೇರಿಸಲಾಯಿತು. ನಂತರ, ಬಂದಂತಹ ಭಕ್ತಾದಿಗಳಿಗೆಲ್ಲ ಪ್ರಸಾದ ವಿತರಿಸಲಾಯಿತು.
ಸಾಯಂಕಾಲ ಸೂರ್ಯಾಸ್ತದ ತರುವಾಯ ಶಿರಾಲಿಯ ಚಿತ್ರಾಪುರ ಸಂಸ್ಥಾನದ ಪ್ರತಿನಿಧಿಗಳು ಜಟಕಾ ಗುಡಿಯ ಎದುರು ಇಡಲಾದ ಬೃಹತ್ ತುಪ್ಪದ ದೀಪವನ್ನು ಬೆಳಗಿಸುವ ಮೂಲಕ ದೀಪಾರಾಧನೆಗೆ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಹಾಗೂ ದೀಪೋತ್ಸವ ಸಮಿತಿಯವರು ಈ ತುಪ್ಪದ ದೀಪವನ್ನು ಬೆಳಗಿಸಿ, ನೆರೆದಿದ್ದ ಭಕ್ತರಿಗೆಲ್ಲ ದೀಪಗಳನ್ನು ಹಚ್ಚುವ ಅವಕಾಶ ಮಾಡಿಕೊಡಲಾಯಿತು. ಸಾವಿರಾರು ಭಕ್ತಾದಿಗಳು ದೇವಾಲಯದ ಪ್ರಾಂಗಣ ಹಾಗೂ ಸುತ್ತಲೂ ಇಟ್ಟಿರುವ ಮಣ್ಣಿನ ಹಣತೆಗಳನ್ನು ಬೆಳಗಿಸಿ ತಮ್ಮತಮ್ಮ ಇಷ್ಟಾರ್ಥವನ್ನು ಮನಸ್ಸಿಲ್ಲಿಯೇ ಬೇಡಿಕೊಳ್ಳುವ ದೃಶ್ಯ ಕಂಡು ಬಂದಿತು. ಕೆಲವು ಭಕ್ತರು ತಾವೇ ಹಿತ್ತಾಳೆಯ ದೀಪಗಳನ್ನು ತಂದು ದೇವಸ್ಥಾನದ ಪೂಜಾರಿಯವರ ಮೂಲಕ ದೇವರ ಮುಂದೆ ಸಂಕಲ್ಪ ಮಾಡಿಸಿಕೊಂಡು ತುಪ್ಪ ಹಾಗೂ ಎಣ್ಣೆಯ ದೀಪಗಳನ್ನು ಬೆಳಗಿಸಿ ಅವುಗಳನ್ನು ದೇವಸ್ಥಾನಕ್ಕೇ ಕೊಡುಗೆಯಾಗಿ ನೀಡಿದರು.
ಎಲ್ಲಿ ನೋಡಿದರೂ ಹಣತೆಯ ದೀಪಗಳು ಜಗಮಗಿಸುತ್ತಿದ್ದವು. ಇನ್ನೊಂದೆಡೆ ದೇವಾಲಯದ ಗೋಡೆಗಳ ಮೇಲ್ಭಾಗದಲ್ಲಿ ವಿದ್ಯುತ್ ದೀಪಗಳಿಂದಲೂ ಅಲಂಕರಿಸಲಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿ ನೈಸರ್ಗಿಕ ಪೂರಕವಾದ ಸಿಡಿಮದ್ದುಗಳ ಪ್ರದರ್ಶನ ಕೂಡ ನಡೆದವು. ಒಟ್ಟಾರೆ ಶ್ರೀ ಶೇಡಬರಿ ಕ್ಷೇತ್ರವೇ ದೀಪಗಳ ಬೆಳಕಿನಿಂದ ಪ್ರಜ್ವಲಿಸುತ್ತಿತ್ತು.
ಪ್ರತೀವರ್ಷದಂತೆ ಈ ಭಾರಿಯೂ ಕೂಡ ಸ್ಥಳೀಯ ಯುವಕ ಯುವತಿಯರು ಸೇರಿ ರಚಿಸಿದ್ದ ಜೋಡಿ ನವಿಲಿನ ಮಾದರಿಯ ಬೃಹತ್ ರಂಗೋಲಿಯು ಬಂದಂತಹ ಎಲ್ಲ ಭಕ್ತಾದಿಗಳನ್ನು ಆಕರ್ಷಿಸುತ್ತಲೇ ಇತ್ತು. ಪ್ರತಿವರ್ಷವೂ ಕೂಡ ಇಂಥ ವಿವಿಧ ಮಾದರಿಯ ಬೃಹತ್ ರಂಗೋಲಿ ರಚನೆ ಇಲ್ಲಿನ ವಿಶೇಷ ಆಕರ್ಷಣೆ ಕೂಡ ಆಗಿದೆ.ರಾತ್ರಿ ಊರಿನ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಎಲ್ಲ ಕಾರ್ಯಕ್ರಮದಲ್ಲೂ ದೇವಸ್ಥಾನದ ಆಡಳಿತ ಮಂಡಳಿಯವರು, ದೀಪೋತ್ಸವ ಸಮಿತಿಯವರು, ಪೂಜಾರಿಗಳು ಹಾಗೂ ಊರಿನ ಪರ ಊರಿನ ಅನೇಕ ಭಕ್ತಾದಿಗಳು ಪಾಲ್ಗೊಂಡರು.