Slide
Slide
Slide
previous arrow
next arrow

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಶ್ರೀಗಂಧ ಕರಕುಶಲಕರ್ಮಿಗಳಿಂದ ಪ್ರತಿಭಟನೆ

300x250 AD

ಶಿರಸಿ: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮವು ಕರಕುಶಲಕರ್ಮಿಗಳನ್ನು ಕಡೆಗಣಿಸುತ್ತಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ತಾಲೂಕಿನ ಶ್ರೀಗಂಧ ಕರಕುಶಲಕರ್ಮಿಗಳು ನಗರದ ಶ್ರೀಗಂಧ ಸಂಕೀರ್ಣದ ಬಳಿ ಪ್ರತಿಭಟನೆ ನಡೆಸಿದರು.

ಶ್ರೀಗಂಧ ಕರಕುಶಲಕರ್ಮಿಗಳ ಹೋರಾಟ ಸಂಘದ ಶಿರಸಿ ವಿಭಾಗದ ಅಧ್ಯಕ್ಷ ಮಹೇಶ ಗುಡಿಗಾರ ಮಾತನಾಡಿ, ಶಿರಸಿಯಲ್ಲಿ 150 ಕ್ಕೂ ಅಧಿಕ ಕರಕುಶಲಕರ್ಮಿಗಳಿದ್ದು, ಶ್ರೀಗಂಧದ ಪೂರೈಕೆಯ ಕೊರತೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮವೇ ನೇರ ಹೊಣೆ. ಕರಕುಶಲತೆಯನ್ನೇ ನಂಬಿದ ಇಲ್ಲಿನ ಕರಕುಶಲಕರ್ಮಿಗಳಿಗೆ ಕೃಷಿಭೂಮಿಯಿಂದ ಅಥವಾ ಬೇರೆ ಯಾವುದೇ ಆದಾಯವಿಲ್ಲ. ಇದರಿಂದ ಸಾಕಷ್ಟು ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಶ್ರೀಗಂಧದ ಕೊರತೆಯಿಂದ ಕೆಲಸವಿಲ್ಲದೇ ಕುಶಲಕರ್ಮಿಗಳು ಇತರೇ ಮರದ ಕೆತ್ತನೆ ವಸ್ತುಗಳನ್ನು ತಯಾರಿಸುತ್ತ ಜೀವನ ನಡೆಸುತ್ತಿದ್ದಾರೆ. ಈ ನಿಗಮದಿಂದ ನಮಗೆ ಯಾವುದೇ ಅಭಿವೃದ್ಧಿ, ಸಹಾಯ ಹಾಗೂ ಸಹಕಾರ ಸಿಕ್ಕಿಲ್ಲ. ಡಚ್ ಸರ್ಕಾರ ಹಾಗೂ ವಿಶ್ವ ಯೋಜನೆಯಡಿಯಲ್ಲಿ ವಸತಿ ಮತ್ತು ಮತ್ತು ಕಾರ್ಯಾಗಾರ ನಿರ್ಮಿಸಿಕೊಟ್ಟಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ಹಣದ ವ್ಯವಹಾರಗಳು ಮುಗಿದು 10 ವರ್ಷಗಳೇ ಕಳೆದಿವೆ. ಇದುವರೆಗೂ ಕುಶಲಕರ್ಮಿಗಳ ಹೆಸರಿಗೆ ವರ್ಗಾಯಿಸಿಕೊಡದೆ, ನಿಗಮವು ಅನ್ಯಾಯ ಮಾಡಿದೆ ಎಂದರು.

ಶಿರಸಿಯ ಶ್ರೀಗಂಧದ ಸಂಕೀರ್ಣದಲ್ಲಿ ರಸ್ತೆ, ಒಳಚರಂಡಿ, ಶೌಚಾಲಯಗಳು ಮುಂತಾದ ಮೂಲಭೂತ ಸೌಕರ್ಯದಿಂದ ಕುಶಲಕರ್ಮಿಗಳು ವಂಚಿತರಾಗಿದ್ದಾರೆ. ಕರಕುಶಲ ಅಭಿವೃದ್ಧಿ ನಿಗಮವು ಹೊರ ರಾಜ್ಯದ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದು, ನಮ್ಮ ಸ್ಥಳೀಯ ಕಲಾಕೃತಿಗಳನ್ನು ಕಡೆಗಣಿಸಿದೆ. ಶೀಘ್ರದಲ್ಲೇ ಕರಕುಶಲಕರ್ಮಿಗಳ ಸಮಸ್ಯೆಗೆ ಪರಿಹಾರ ಒದಗಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

300x250 AD

ಶ್ರೀಗಂಧ ಕರಕುಶಲಕರ್ಮಿಗಳ ಹೋರಾಟ ಸಂಘದ ಪ್ರಮುಖ ನಂದನ ಸಾಗರ ಮಾತನಾಡಿ, ಶ್ರೀಗಂಧದ ಕೊರತೆಯಿಂದ ಬೇರೆ ಕೆಲಸಕ್ಕೆ ಹೋಗುವ ಅನಿವಾರ್ಯತೆ ಇದೆ. ಕಲೆಯನ್ನು ಕೊಲೆ ಮಾಡುವ ಕೆಲಸವಾಗುತ್ತಿದೆ. ಈ ನಿಗಮಕ್ಕೆ ಕುಶಲಕರ್ಮಿಗಳ ರಕ್ತದ ಕಣದಿಂದ ಹಣ ಬರುತ್ತಿದೆ. ಆದರೂ ನಮ್ಮನ್ನು ಕಡೆಗಣಿಸಿತ್ತಿದ್ದಾರೆ ಎಂದ ಅವರು, ಶ್ರೀಗಂಧ ಕರಕುಶಲಕರ್ಮಿ ತೀರಿಕೊಂಡ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಈ ಹಿಂದೆ ನೀಡುವ ಗೌರವಧನದ ಬದಲು 25 ಸಾವಿರ ರೂ. ನೀಡಬೇಕು. 60 ವರ್ಷ ಮೇಲ್ಪಟ್ಟ ಕುಶಲಕರ್ಮಿಗಳಿಗೆ ಮಾಶಾಸನ ನೀಡಬೇಕು. ತೀರಿಕೊಂಡ ಕುಶಲಕರ್ಮಿಗಳ ಗುರುತಿನ ಚೀಟಿಯನ್ನು ಸಂಬಂಧಪಟ್ಟವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ನಿಗಮದ ನಿರ್ದೇಶಕ ಮಂಡಳಿಯಲ್ಲಿ ಒಂದು ಕುಶಲಕರ್ಮಿಯನ್ನು ನಿರ್ದೇಶಕರಾಗಿ ನೇಮಿಸಬೇಕು. ಅಲ್ಲದೇ, ಇಬ್ಬರು ಕರಕುಶಲಕರ್ಮಿಗಳನ್ನು ಕರೆದು ಅಧಿಕಾರಿಗಳು ಸಭೆ ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸಬೇಕು ಎಂದ ಅವರು, ಈ ಪ್ರತಿಭಟನೆ ಕೇವಲ ಸಾಂಕೇತಿಕವಾಗಿದ್ದು, ನಮ್ಮ ಸಮಸ್ಯೆಗಳನ್ನು ಬಗೆಹರಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾಗಿ ಅರೆಬೆತ್ತಲೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. ಮನವಿಯನ್ನು ಯೋಜನಾಧಿಕಾರಿ ಗಣೇಶ ಸಿಂಗ್ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಗುಡಿಗಾರ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ರಾಜೇಶ ಗುಡಿಗಾರ, ಶಿರಸಿ ವಿಭಾಗದ ಉಪಾಧ್ಯಕ್ಷ ದಿವಾಕರ ಮೂರೂರು, ಸಾಗರದ ರವಿ ಶಿರ್ಶಿಕರ, ಪ್ರಮುಖರಾದ ನಾರಾಯಣ ಗುಡಿಗಾರ, ಮಂಜುನಾಥ ಶೇಟ್ ಸೇರಿದಂತೆ ಹಲವರಿದ್ದರು.

Share This
300x250 AD
300x250 AD
300x250 AD
Back to top