ದಾಂಡೇಲಿ : ನಗರದ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ದಾಂಡೇಲಿ ರೈಲು ನಿಲ್ದಾಣ ಎಂದು ಕೇಂದ್ರ ರೈಲ್ವೆ ಸಚಿವಾಲಯ ಮರು ನಾಮಕರಣ ಮಾಡಿದೆ ಎಂದು ಶಾಸಕರಾದ ಆರ್.ವಿ. ದೇಶಪಾಂಡೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಮಂಗಳವಾರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಕಾಳಿ ನದಿಯ ದಡದಲ್ಲಿರುವ ವನ್ಯಜೀವಿಗಳ ನೈಸರ್ಗಿಕ ಆವಾಸ ಸ್ಥಾನ ಮತ್ತು ಹಚ್ಚ ಹಸಿರಿನ ಕಾಡುಗಳೊಂದಿಗೆ ಪ್ರವಾಸಿ ತಾಣವಾಗಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಮತ್ತು ದೇಶದ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. ಆದರೆ ರೈಲು ನಿಲ್ದಾಣದ ಹೆಸರು ಪ್ರವಾಸಿ ತಾಣಕ್ಕಿಂತ ಭಿನ್ನವಾಗಿದ್ದ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಗೊಂದಲವನ್ನು ಉಂಟುಮಾಡುತ್ತಿರುವುದನ್ನು ಮನಗಂಡು ‘ಅಂಬೇವಾಡಿ ರೈಲು ನಿಲ್ದಾಣ’ದ ಬದಲು ‘ದಾಂಡೇಲಿ ರೈಲು ನಿಲ್ದಾಣ’ ಎಂದು ಮರುನಾಮಕರಣ ಮಾಡುವುದು ಹೆಚ್ಚು ಸೂಕ್ತವೆಂದು, ಈ ಮೊದಲು ಕೇಂದ್ರ ರೇಲ್ವೆ ಸಚಿವರಿಗೆ ಪತ್ರ ಮುಖೇನ ತಾನು ವಿನಂತಿಸಿದ್ದೇನು. ಪ್ರಯಾಣಿಕರ ಗೊಂದಲವನ್ನು ತಪ್ಪಿಸಲು ಮತ್ತು ಸಹಾಯ ಮಾಡಲು ಪ್ರಸ್ತುತ ‘ಅಂಬೆವಾಡಿ ರೈಲು ನಿಲ್ದಾಣ’ದ ಬದಲಿಗೆ ‘ದಾಂಡೇಲಿ ರೈಲು ನಿಲ್ದಾಣ’ ಎಂದು ಮರುನಾಮಕರಣವಾಗಿದ್ದು, ದಾಂಡೇಲಿಗರ ಬಹುದಿನದ ಕನಸು ಸಾಕಾರಗೊಂಡಿದೆ. ಈ ಮೂಲಕ ಅತೀ ಶೀಘ್ರದಲ್ಲಿ ರೈಲು ಸಂಚರಿಸುವ ಆಶಾ ಭಾವನೆಯನ್ನು ಹೊಂದಿದ್ದೇನೆ ಎಂದು ಪ್ರಕಟಣೆಯಲ್ಲಿ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.