Slide
Slide
Slide
previous arrow
next arrow

ಜ.15 ರೊಳಗೆ ಸಚಿವ ಮಂಕಾಳ ವೈದ್ಯ ಜಿಲ್ಲೆಗೆ ಟ್ರಾಮಾ ಸೆಂಟರ್ ಘೋಷಿಸಲಿ; ಅನಂತಮೂರ್ತಿ ಹೆಗಡೆ ಸವಾಲು

300x250 AD

ಶಿರಸಿ: ಜಿಲ್ಲಾ ಉಸ್ತುವಾರಿ ಹಾಗು ಮೀನುಗಾರಿಕಾ ಸಚಿವರಾಗಿರುವ ಮಂಕಾಳು ವೈದ್ಯರವರು ಸಮುದ್ರದ ಕಸ ಗುಡಿಸಲು 3 ತಿಂಗಳಲ್ಲಿ ರೂ.840 ಕೋಟಿ ಹಣವನ್ನು ವಿನಿಯೋಗಿಸಲು ಹೊರಟಿದ್ದಾರೆ. ಆದರೆ ಪ್ರತಿನಿತ್ಯ ಅಪಘಾತದಿಂದ ಸಾಯುವ ಜಿಲ್ಲೆಯ ಜನರಿಗೆ ಸುಸಜ್ಜಿತ ಆಸ್ಪತ್ರೆ ಘೋಷಿಸಲು ಇವರ ಬಳಿ ಸಮಯ, ಹಣವಿಲ್ಲವಿರುವುದು ಜಿಲ್ಲೆಯ ದುರ್ದೈವದ ಸಂಗತಿಯಲ್ಲದೇ ಮತ್ತಿನ್ನೇನು ಎಂದು ಬಿಜೆಪಿ ಸದಸ್ಯ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ.

ಜನರ ಜೀವ ಮುಖ್ಯವೇ, ರೂ.840 ಕೋಟಿಯಲ್ಲಿ ಸಮುದ್ರ ಗುಡಿಸುವುದು ಮುಖ್ಯವೇ?

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಗರದ ಕಸ ತೆಗೆಯಲು ರೂ.840 ಕೋಟಿ ಹಣವನ್ನು ಅನುದಾನ ಇಟ್ಟಿದ್ದೀರಿ ಎಂಬುದನ್ನು ಮಾಧ್ಯಮದ ಮೂಲಕ ತಿಳಿದಿದ್ದೇನೆ. ಅದೂ ಸಹ ಮೂರು ತಿಂಗಳೊಳಗೆ ಎಂಬುದಾಗಿ ಗಡುವನ್ನು ಸಹ ಘೋಷಿಸಿದ್ದೀರಿ. ಆದರೆ ಸುಸಜ್ಜಿತ ಆಸ್ಪತ್ರೆ ವಿಷಯದಲ್ಲಿ ಯಾಕೋ ಮೌನ ತಾಳಿರುವುದು ನಿಮ್ಮಂತ ಹಿರಿಯ ನಾಯಕರಿಗೆ ಔಚಿತ್ಯವಲ್ಲ. ರೂ. 840 ಕೋಟಿಗಳಷ್ಟರಲ್ಲಿ ದಾಂಡೇಲಿ, ಶಿರಸಿ, ಕುಮಟಾ ಹೀಗೆ ಮೂರು ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಬಹುದಲ್ಲವೇ ? ಜಿಲ್ಲೆಯ
ಜನರ ಪ್ರಾಣಕ್ಕಿಂತ ತಮಗೆ ಸಮುದ್ರದ ಕಸ ಗುಡಿಸುವ ಕೆಲಸ ಹೆಚ್ಚಾಯಿತೇ? ಎಂದು ಕೇಳಿದ್ದಾರೆ.

ಆಸ್ಪತ್ರೆ ಯಾವಾಗ ಎಂದರೆ ಮಾತ್ರ ಮಾತಿಲ್ಲ:

ಸಾಗರದ ಜೀವ ಸಂಕುಲದ ಬಗ್ಗೆ ನನಗೂ ಕಳಕಳಿಯಿದೆ. ಜೊತೆಗೆ ಮೀನುಗಾರರ ಸಮಸ್ಯೆಯನ್ನೂ ತಿಳಿದಿದ್ದೇನೆ. ಸಮುದ್ರದಲ್ಲಿ ಕಸ ಗುಡಿಸಿ 840 ಕೋಟಿ ಖರ್ಚು ಮಾಡಲು ತಮಗೆ ಬಹಳ ಆಸಕ್ತಿಯಿದೆ, ಆದರೆ ಸಾವಿರಾರು ಜನರ ಜೀವ ಉಳಿಸುವ ಅಸ್ಪತ್ರೆ ಯಾವಾಗ ಮಾಡುತ್ತೀರಿ ಎಂಬುದರ ಬಗ್ಗೆ ಮಾತೇ ಇಲ್ಲ. ಇದರ ಮರ್ಮ ಏನು? 840 ಕೋಟಿ ರೂಪಾಯಿ ಕಸ ಗುಡಿಸುವ ಕೆಲಸ ಅಷ್ಟೊಂದು ಲಾಭದಾಯಕವೇ ? ಚುನಾವಣೆಯಲ್ಲಿ ಗೆದ್ದರೆ ಸ್ವಂತ ಖರ್ಚಿನಿಂದ ಅಸ್ಪತ್ರೆ ಮಾಡುತ್ತೇನೆ ಎಂದ ನಿಮ್ಮ ಒಳ್ಳೆಯತನ ಉಸ್ತುವಾರಿ ಸಚಿವರಾದ ಮೇಲೆ ಎಲ್ಲಿ ಹೋಯಿತು ? ತಮ್ಮಲ್ಲಿ ಅಧಿಕಾರ ಇದೆಯೆಂದು ಬೀಗಬೇಡಿ, ಅಧಿಕಾರ ಯಾರಿಗೂ ಶಾಶ್ವತವಲ್ಲಾ ನೆನಪಿಡಿ ಎಂದು ಅವರು ಮಾರ್ಮಿಕವಾಗಿ ಸಚಿವ ವೈದ್ಯರಿಗೆ ಮಾತಿನ ಛಾಟಿ ಬೀಸಿದ್ದಾರೆ.

ಸುಸಜ್ಜಿತ ಆಸ್ಪತ್ರೆಯಿಲ್ಲದಿರುವುದು ನಾಚಿಗೇಡಿನ ಸಂಗತಿ:

300x250 AD

ಮಂಗಳೂರು ಭಾಗದಲ್ಲಿ ಎಂಟು ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಕೂಡ ಇಲ್ಲ. ಈ ವಿಷಯ ನಮಗೆ ನಾಚಿಕೆ ಆಗಬೇಕಲ್ಲವೆ ? ನಮಗೂ ನೆಮ್ಮದಿಯಿಂದ ಬದುಕುವ ಹಕ್ಕಿಲ್ಲವೇ ? ನಾವೇನು ಪಾಪ ಮಾಡಿದ್ದೇವೆ ? ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿದೆ ಇದಕ್ಕೆ ಯಾರು ಹೊಣೆ ? ಎಂದರು. ಕಾರವಾರದಲ್ಲಿ ಆಸ್ಪತ್ರೆಯಾದರೆ ಸಂತಸವೇ. ಆದರೆ ಕಾರವಾರದಲ್ಲಿ ಅಸ್ಪತ್ರೆಯಾದರೆ ಹೊನ್ನಾವರ, ಕುಮಟ- ಶಿರಸಿ ಭಾಗಕ್ಕೆ ಪ್ರಯೋಜನವಿಲ್ಲ. ಕಾರವಾರಕ್ಕೆ ಮಾತ್ರ ಸೀಮಿತವಾಗುತ್ತದೆ. ಹೊನ್ನಾವರ, ಶಿರಸಿ – ಕುಮಟಾ ಭಾಗಕ್ಕೆ ಒಂದು ಮೆಡಿಕಲ್ ಕಾಲೇಜು – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಡಿ ಎಂದು ಅವರು ಕೇಳಿದ್ದಾರೆ.

ಜ.15 ರೊಳಗೆ ಟ್ರಾಮಾ ಸೆಂಟರ್ ಘೋಷಿಸಲಿ: ಇಲ್ಲವಾದಲ್ಲಿ ಜನರೊಡಗೂಡಿ ಉಗ್ರ ಹೋರಾಟದ ಎಚ್ಚರಿಕೆ

ಉತ್ತರ ಕನ್ನಡದಲ್ಲಿ ಟ್ರಾಮಾ ಸೆಂಟರ್ ಸಹ ಇಲ್ಲದಿರುವುದಕ್ಕೆ ಸದನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸಹ ಆಶ್ಚರ್ಯ ಪಟ್ಟಿದ್ದಾರೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ, ದಯವಿಟ್ಟು ಒಂದು ಕಟ್ಟಡವನ್ನು ಬಾಡಿಗೆಗೆ ಪಡೆದರೂ ಪರವಾಗಿಲ್ಲ, ಒಂದು ಟ್ರಾಮಾ ಸೆಂಟರ್ ತಕ್ಷಣ ಪ್ರಾರಂಭ ಮಾಡಿ, ಜ.15, 2024ರ ಒಳಗೆ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಮೆಡಿಕಲ್ ಕಾಲೇಜು -ಆಸ್ಪತ್ರೆಗೆ ಸಮಿತಿ ರಚನೆ ಮಾಡಿ, ಖಾಸಗಿ ಸಹಯೋಗ ಬೇಕೆಂದರೆ ಮೆಡಿಕಲ್ ಕಾಲೇಜು ನಡೆಸುವ ಖಾಸಗಿ ಸಂಸ್ಥೆಯವರಿಗೆ ಪತ್ರವನ್ನಾದರೂ ಬರೆಯಿರಿ. ದಯವಿಟ್ಟು ಆಸ್ಪತ್ರೆ ಕೊಡಿಸಿ ಜನರ ಜೀವ ಉಳಿಸಿ. ಇಲ್ಲದಿದ್ದರೆ ನಾವು ಜಿಲ್ಲೆಯ ಜನರನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.

ಸಚಿವ ಮಂಕಾಳರ ಬಗ್ಗೆ ಬಗ್ಗೆ ನನಗೆ ಅಪಾರ ಗೌರವ ಇದೆ. ತಮಗೆ ಬಡವರ ಕುರಿತಾಗಿ ಮಾನವೀಯ ಅಂತಃಕರಣ ಇದೆ ಎಂಬುದು ನನಗೆ ತಿಳಿದಿದೆ. ಆದರೆ ರಾಜಕೀಯ ಒತ್ತಡಕ್ಕೆ ಸಿಲುಕಿ ತಾವು ಬದಲಾಗಬೇಡಿ ಎಂದು ನಿಮ್ಮ ಅಭಿಮಾನಿಯಾಗಿ ಕೇಳಿ ಬೇಡಿಕೊಳ್ಳುತ್ತಿದ್ದೇನೆ. ಆಸ್ಪತ್ರೆ ಘೋಷಣೆ ಮಾಡಿ, ನಂತರದಲ್ಲಿ ನೀವು ಯಾವ ಸಮುದ್ರದ ಕಸವನ್ನಾದರೂ ತೆಗಿಯಿರಿ. ಸಾಗರದ ಕಸ ತೆಗೆಯುವುದು ಒಳ್ಳೆಯ ಕಾರ್ಯವೇ. ಅದಕ್ಕೂ ಮುನ್ನ ಜನರ ಪ್ರಾಣ ಕಾಪಾಡುವುದು ಜನಪ್ರತಿನಿಧಿಯ ಆದ್ಯತೆಯಾಗಬೇಕು. ಜಿಲ್ಲೆಯ ಮೀನುಗಾರರಿಗೆ , ಬಡವರಿಗೆ, ಕೂಲಿಕಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ನಿಮ್ಮ ಮೊದಲ ಆಯ್ಕೆಯಾಗಿರಲಿ. ಅದು ನೀವು ನಿಮ್ಮ ಜಿಲ್ಲೆಗೆ ನೀಡುವ ಸೇವೆಯಾಗಿದೆ ಎಂದರು.

ಮಾನ್ಯ ಮೀನುಗಾರಿಕಾ ಸಚಿವರೇ, ಏನು ಸ್ವಾಮಿ ಇದು ? ನಮ್ಮ ತೆರಿಗೆ ಹಣ ಈ ರೀತಿ ವ್ಯಯ ಆಗುತ್ತಿದೆಯೇ? ಸಮುದ್ರ ದಂಡೆಯ ಕಸ ಗುಡಿಸಲು 840 ಕೋಟಿ ರೂಪಾಯಿ ? ಇದನ್ನ ಗಮನಿಸಿದರೆ ಯಾವುದೋ ಬಹುದೊಡ್ಡ ”ಡೀಲ್’ ವಾಸನೆ ಬರುತ್ತಿದೆ. ಈ ವರದಿ ಸತ್ಯವೇ ಆಗಿದ್ದರೆ ಇದರ ಬಗ್ಗೆ ಮುಂದಿನ ದಿನ ಪರಿಶೀಲಿಸಬೇಕು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬ ಹಾಗೆ ನಾವು ಇಂದು ಆಸ್ಪತ್ರೆ ಮಾಡಿ ಎಂದರೆ ನಿಮ್ಮಲ್ಲಿ,ನಿಮ್ಮ ಸರಕಾರದಲ್ಲಿ ಹಣವಿಲ್ಲ, ಆದರೆ ಈ ರೀತಿಯ ಯೋಜನೆಗೆ ಹಣವಿದೆ ಅಂದರೆ ಏನು ಅರ್ಥ ? ಜಿಲ್ಲೆಯ ಜನ ದಡ್ಡರಲ್ಲ. ಎಲ್ಲವನ್ನೂ ನೋಡುತ್ತಿದ್ದಾರೆ. ಸಮಯ ಬಂದಾಗ ತಕ್ಕ ಉತ್ತರ ನೀಡುತ್ತಾರೆ.

  • ಅನಂತಮೂರ್ತಿ ಹೆಗಡೆ
Share This
300x250 AD
300x250 AD
300x250 AD
Back to top