ಶಿರಸಿ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಆದರೆ ಇಂದಿನ ಯುವಕರಲ್ಲಿ ಅಂತಹ ಸಾಮರ್ಥ್ಯ ಕುಂದುತ್ತಿದೆ. ಸಮಾಜವನ್ನು ಸಮದೂಗಿಸಿಕೊಂಡು ಹೋಗುವಂತಹ ಮನಸ್ಥಿತಿ ಇಂದಿನ ಯುವಕರಲ್ಲಿ ಕಣ್ಮರೆಯಾಗಿದೆ. ಸಮಾಜದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದರೂ ಕೂಡ ತಮಗೆ ಸಂಬಂಧವಿಲ್ಲದ ರೀತಿಯ ವರ್ತನೆ ಇಂದಿನ ಪೀಳಿಗೆಯಲ್ಲಿ ಹೆಚ್ಚಾಗಿದೆ, ಎಂದು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರತ್ನಾ ಹೇಳಿದರು.
ಅವರು ಎಂ, ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಅಪರಾಧ ನಡೆದ ಮೇಲೆ ಕಾರ್ಯಾಚರಣೆಯನ್ನು ಕೈಗೊಳ್ಳುವುದಕ್ಕಿಂತ ಅಪರಾಧ ನಡೆಯದಂತೆ ಮುಂಜಾಗ್ರತ ಕ್ರಮವನ್ನು ಕೈಗೊಳ್ಳುವುದು ಉತ್ತಮ ಮಾರ್ಗವಾಗಿದೆ. ಯುವಶಕ್ತಿ ಜಾಗೃತವಾದರೆ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬಹುದು. ಆದ್ದರಿಂದ ಯುವಕರು ಇಂದಿನಿಂದಲೇ ಕಾರ್ಯ ಪ್ರವೃತ್ತರಾಗಬೇಕೆಂದು ಯುವಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಹವಾಲ್ದಾರ್ ರಮೇಶ್.ಸಿ. ಉಚ್ಚಂಡಿಯವರು ಕಾಲೇಜಿನ ಯುವಕರಲ್ಲಿ ಶಿಸ್ತು ಪ್ರಧಾನವಾಗಿದ್ದು, ಅದನ್ನು ರೂಡಿಗತ ಮಾಡಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ಸೈಬರ್ ಕ್ರೈಂನಂತಹ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲಿದೆ. ಬೇರೆ ಬೇರೆ ಆಕರ್ಷಣೆಗಳಿಗೆ ಒಳಗಾಗುತ್ತಿರುವ ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ನೈಜ ಕರ್ತವ್ಯಗಳನ್ನ ಮರೆತು ಅನಗತ್ಯ ವಿಚಾರಗಳಿಗೆ ಇಂದಿನ ಯುವ ಪೀಳಿಗೆ ಬಲಿಯಾಗುತ್ತಿದೆ. ಪ್ರತಿ ಆರು ತಿಂಗಳಿಗೆ ಪಾಸ್ವರ್ಡ್ ಬದಲಾಯಿಸಿಕೊಳ್ಳತಕ್ಕದ್ದು. ನಮ್ಮ ಜನ್ಮ ದಿನಾಂಕ ಹಾಗೂ ವಾಹನ ನಂಬರನ್ನು ಪಾಸ್ವರ್ಡ್ ಆಗಿ ಬಳಸಬಾರದು. ಆನ್ಲೈನ್ ಪೇಮೆಂಟ್ ನಲ್ಲಿ ಲಿಮಿಟ್ ಟ್ರಾನ್ಸಾಕ್ಷನ್ ಅಳವಡಿಸಿಕೊಳ್ಳಬೇಕು. ಕಡಿಮೆ ಬಡ್ಡಿ ದರದ ಆ್ಯಪ್ ಗಳ ಬಗ್ಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ ಎಂಬ ಸೂಚನಾ ಫಲಕಗಳನ್ನು ಪ್ರದರ್ಶಿಸಿದರು. ಸೈಬರ್ ಕ್ರೈಂ ಗೆ ಒಳಗಾದ ವ್ಯಕ್ತಿಗಳು 1930 ಗೆ ತಕ್ಷಣ ಕರೆ ಮಾಡಿ ದೂರು ಸಲ್ಲಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಟಿ.ಎಸ್ ಹಳೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು , ಪೊಲೀಸ್ ಸಿಬ್ಬಂದಿಗಳು, ಉಪಸ್ಥಿತರಿದ್ದರು. ಸಂಗೀತ ವಿಭಾಗದ ಮುಖ್ಯಸ್ಥ ಡಾ. ಕೆ. ಜಿ ಭಟ್ ಸ್ವಾಗತಿಸಿ, ವಂದಿಸಿದರು.