ಯಲ್ಲಾಪುರ: ಪ್ಲಾಸ್ಟಿಕ್ ಮುಕ್ತವಾದ ಪರಿಸರ ಎಲ್ಲರ ಸಂಕಲ್ಪವಾಗಬೇಕು ಎಂದು ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಟಿ.ಸಿ.ಗಾಂವ್ಕರ ಅಭಿಪ್ರಯಪಟ್ಟರು.
ಅವರು ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಯಲ್ಲಾಪುರದ ಆಶೀಯಾ ಸಮಾಜ ಸೇವಾ ಸಂಸ್ಥೆಯವರು ಆಯೋಜಿಸಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ನಿತ್ಯ ನಾವು ಬಳಸುವ ವಸ್ತುಗಳು ತ್ಯಾಜ್ಯಗಳಾಗಿ ನಮ್ಮ ಜೀವನಕ್ಕೆ ಆತಂಕ ತಂದೊಡ್ಡಿದೆ. ನಾವು ನಮ್ಮ ಇರುವಿಕೆಯನ್ನು ಪರಿಸರಕ್ಕೆ ಪೂರಕವಾಗಿ ದಾಖಲಿಸುತ್ತಾ ಹೋಗಬೇಕು. ಹಾಗಾದಾಗ ಮಾತ್ರ ಆರೋಗ್ಯ ಪೂರ್ಣವಾದ ಪರಿಸರ ನಮ್ಮದಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ ಮಾತನಾಡಿ, ಸ್ವಚ್ಛತೆ ಕುರಿತಾದ ಜಾಗೃತಿ ನಮ್ಮ ಮನಸ್ಸಿನಲ್ಲಿ ಮೊದಲು ಮೂಡಬೇಕು. ನಾವು ಬದಲಾಗದೇ ನಮ್ಮ ಜೀವನ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬದುಕಿನ ಜೊತೆಗೆ ಎಲ್ಲರ
ಆರೋಗ್ಯ ಪೂರ್ಣವಾದ ಬದುಕನ್ನು ಯೋಚಿಸಿ ಸ್ವಚ್ಛತೆಯ ಕಾಳಜಿವಹಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಭಟ್ಟ ಕೀಚನಾಳ, ಆಶಿಯಾ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿಜಯ ನಾಯ್ಕ, ಅಧ್ಯಕ್ಷ ಅನಿಲ್ ಮರಾಠೆ, ಸಂಸ್ಥೆಯ ಸದಸ್ಯರಾದ ಫರಜಾನಾ, ಆಯೇಷಾ, ಬಾನು.ಬಿ., ಮುಷರತ್, ಬಾಲಚಂದ್ರ, ಶಾಲೆಯ ಮುಖ್ಯಾಧ್ಯಾಪಕ ಎಂ. ಕೆ. ಭಟ್ಟ ಉಪಸ್ಥಿತರಿದ್ದರು. ಶಿಕ್ಷಕ ಎಸ್. ಟಿ.ಬೇವಿನಕಟ್ಟಿ ನಿರ್ವಹಿಸಿ, ವಂದಿಸಿದರು.
ನಂತರ ವಜ್ರಳ್ಳಿಯ ಬೀಗಾರ ಬಸ್ ನಿಲ್ದಾಣದಿಂದ ಹೊನ್ನಗದ್ದೆ ಕ್ರಾಸ್ನವರೆಗೆ ಆಶೀಯಾ ಸಮಾಜ ಸೇವಾ ಸಂಸ್ಥೆಯ ಸದಸ್ಯರು ಸಾರ್ವಜನಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.