Slide
Slide
Slide
previous arrow
next arrow

ಯಶಸ್ವಿಯಾಗಿ ಜರುಗಿದ ಶಕ್ತಿ ಸಂಚಯ ಮಹಿಳಾ ಸಮಾವೇಶ

300x250 AD

ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮ – ಸಹಸ್ರ ಸಂಖ್ಯೆಯಲ್ಲಿ ಭಾಗಿಯಾದ ಮಾತೆಯರು

ಶಿರಸಿ: ಅಕ್ಷಯ ಸೇವಾ ಪ್ರತಿಷ್ಠಾನದ ವತಿಯಿಂದ ಭಾನುವಾರ ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ಶಕ್ತಿ ಸಂಚಯ’ ಮಹಿಳೆಯರ ಬೃಹತ್ ಸಮಾವೇಶ ಅಭೂತಪೂರ್ವ ಯಶಸ್ಸನ್ನು ಕಂಡಿತು.

ಕಾರ್ಯಕ್ರಮವನ್ನು ಕೆಡಿಸಿಸಿ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಸುಮಾ ನಾಯಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷ್ಮೀ ಬಿ.ಜಿ. ಮಾತನಾಡಿ, ಸ್ತ್ರೀ ಎನ್ನುವವಳಿಗೆ ಸಂದರ್ಭಾನುಸಾರ ಅರ್ಥ ಬದಲಾಗುತ್ತ ಹೋಗುತ್ತದೆ. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಪ್ರಧಾನ ಸ್ಥಾನ ನೀಡಲಾಗಿದೆ. ಹಿಂದಿನಿಂದಲೂ ಸಹ ಮಹಿಳೆಯರು ಶಸ್ತ್ರ, ಶಾಸ್ತ್ರ ಪಾರಂಗತರು. ಶಿಕ್ಷಣದ ಹೆಸರಿನಲ್ಲಿ ಪ್ರಕೃತಿಯ ನಿಯಮ ಮೀರಿ ಹೋಗುವಂತಹದ್ದಲ್ಲ ಎಂದರು.

ಮಹಿಳೆಯರು ತಮ್ಮ ನೈಜ ಸಾಮರ್ಥ್ಯ ಮತ್ತು ಗುಣವನ್ನು ಇಟ್ಟುಕೊಂಡು, ಸಾಮಾಜಿಕ ಕಾರ್ಯಗಳಲ್ಲಿ, ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರಕ್ಕೆ ಅಂತರವಿದೆ. ತನ್ನ ಹಾಗೂ ತನ್ನ ಕುಟುಂಬದ, ಸಮಾಜದ ಹಿತಕ್ಕಾಗಿ ಏನು ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳುವುದು, ಜವಾಬ್ದಾರಿ ತೆಗೆದುಕೊಳ್ಳುವುದು ಸ್ವಾತಂತ್ರ್ಯ ಎನಿಸಿಕೊಳ್ಳುತ್ತದೆ. ಮಹಿಳೆಯರು ತಮ್ಮ ಕುಟುಂಬದ ಕಾಳಜಿಯ ಜೊತೆಗೆ ಸಮಾಜದ ಉನ್ನತಿಗಾಗಿ ಸಮಯವನ್ನು ಮೀಸಲಿಡಬೇಕು. ಆ ಮೂಲಕ ಭಾರತವನ್ನು ಇನ್ನಷ್ಟು ಸಶಕ್ತಗೊಳಿಸಬೇಕೆಂದರು.

ಸಮಾರೋಪ ಸಮಾರಂಭದಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನ ಅತಿಥಿ ಉಪನ್ಯಾಸಕಿ ಡಾ. ಗೀತಾ ಪಾಸ್ತೇ ಮಾತನಾಡಿ, ಸ್ತ್ರೀಯರು ತಮ್ಮ ವ್ಯಕ್ತಿತ್ವ ನಿರ್ಮಾಣದೆಡೆಗೆ ಗಮನ ನೀಡಬೇಕು. ತಮೋಗುಣ, ರಜೋಗುಣ ಮತ್ತು ಸಾತ್ವಿಕ ಗುಣಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಜ್ಞಾನಮಯ ಕೋಶ, ಅನ್ನಮಯ ಕೋಶಗಳ ಕುರಿತು ತಿಳಿಸಿದರು. ಇದೇ ವೇಳೆ ಮಹಿಳೆಯರು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳ ಆಗುಹೋಗುಗಳ ಕುರಿತು ಚರ್ಚಿಸಿದರು.

ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ರಮಾ ಪಟವರ್ಧನ ಮಾತನಾಡಿ, ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರದಂತೆ ಬಳಸಬಾರದೆಂದು ಕರೆ ನೀಡಿದರು.

ಚರ್ಚಾ ಅವಧಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಅಧ್ಯಾಪಕಿ ವಿಜಯಲಕ್ಷ್ಮೀ ದಾನರೆಡ್ಡಿ, ಸಮೀಕ್ಷಾ ಪಾಯ್ದೆ, ರಾಜೇಶ್ವರಿ ಹೆಗಡೆ ಚರ್ಚಾ ಪ್ರವರ್ತಕರಾಗಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸಮಾವೇಶದ ಜಿಲ್ಲಾ ಸಂಚಾಲಕಿ ಶ್ರೀದೇವಿ ದೇಶಪಾಂಡೆ, ನಂದಿನಿ ರಾಯಾಪುರ, ಸುಮಾನಾ ಕರ್ಕಿಹಕ್ಲ, ಹಿರಿಯ ಸಾಮಾಜಿಕ ಕಾರ್ಯಕರ್ತ ಶಂಕರ ನಾರಾಯಣ ಹೊಸ್ಕೊಪ್ಪ ಸೇರಿದಂತೆ ಇನ್ನಿತರರು ಇದ್ದರು.

300x250 AD

ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬೇಕು ಎನ್ನುವುದಾದರೆ ನೈಜವಾದ ಭಾರತೀಯ ಶಿಕ್ಷಣ ದೊರೆಯಬೇಕು.

    -ಸುಮಾ ನಾಯಕ (ಸಹಾಯಕ ಪ್ರಧಾನ ವ್ಯವಸ್ಥಾಪಕಿ, ಕೆಡಿಸಿಸಿ ಬ್ಯಾಂಕ್)

ಮಹಿಳೆಯರಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರದ ಪಾಠವೂ ಮುಖ್ಯವಾಗಿರುತ್ತದೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಸಂಸ್ಕಾರ ಎನ್ನುವ ಬೇರನ್ನು ಮರೆತು ಬದುಕಬಾರದು.


– ರಮಾ ಪಟವರ್ಧನ (ಸಾಮಾಜಿಕ ಸೇವಾ ಕಾರ್ಯಕರ್ತೆ)

ಸಹಸ್ರ ಸಂಖ್ಯೆಯಲ್ಲಿ ಭಾಗಿಯಾದ ಮಾತೆಯರು:

ಘಟ್ಟದ ಮೇಲಿನ 6 ತಾಲೂಕಿನಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಸಮಾವೇಶದಲ್ಲಿ ಅತ್ಯುತ್ಸಾಹದಿಂದ ಭಾಗಿಯಾಗಿದರು. ಕಾರ್ಯಕ್ರಮದ ಪ್ರವೇಶದ್ವಾರದಲ್ಲಿ ದೇಶದ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವೀರ ಮಹಿಳೆಯರ ಬಿತ್ತಿಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

Share This
300x250 AD
300x250 AD
300x250 AD
Back to top