ಆತ್ಮ ನಿರ್ಭರ ಭಾರತ ನಿರ್ಮಿಸೋಣ: ಅನಸೂಯಾ ಹೆಗಡೆ
ಶಿರಸಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಆರಂಭವಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಯಶಸ್ವಿಯಾಗಿ ಜರುಗಿತು.
ಈ ಯಾತ್ರೆಯು ಗ್ರಾಮ, ಗ್ರಾಮಗಳ ಜನರನ್ನು ತಲುಪುತ್ತಿದ್ದು, ಗ್ರಾಮಸ್ಥರು, ಫಲಾನುಭವಿಗಳು ತಮ್ಮ ಅನುಭವ ಹಾಗೂ ಸಂತಸವನ್ನು ಹಂಚಿಕೊಂಡರು. ಬ್ಯಾಂಕ್ ಆಪ್ ಬರೋಡಾ ಶಾಖೆಯ ವ್ಯವಸ್ಥಾಪಕ ಆನಂದ ಪ್ರತಿಜ್ಞಾ ವಿಧಿ ಭೋಧಿಸಿದರು.
ಈ ಸಂದರ್ಭದಲ್ಲಿ ಆಯೋಜನೆಗೊಂಡ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಹೆಗಡೆ, ಮೋದಿಯವರ ಅಭಿಮಾನಿಗಳೇ ಇಂದಿನ ಯುವಕರಾಗಿದ್ದಾರೆ. ನಮಗೆ ಸುಭಿಕ್ಷ, ಸುರಕ್ಷಿತ ದೇಶವನ್ನು ನಿರ್ಮಿಸಿಕೊಟ್ಟವರು ನಮ್ಮ ದೇಶದ ಪ್ರಧಾನಿ ಮೋದಿಯವರು. ನಾವು ಆಶಯಗಳಿಗೆ ಸ್ಪಂದಿಸಿ, ಸರಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹಬ್ಬದಲ್ಲಿ ನಾವು ಕಡುಬು ಕಜ್ಜಾಯ ತಿನ್ನುತ್ತಿದ್ದರೆ ಮೋದಿಯವರು ಗಡಿ ಕಾಯುವ ಯೋಧರ ಜತೆಗೆ ಕೂತು ಊಟ ಮಾಡುತ್ತಾರೆ. ನಾವು ಇಲ್ಲಿ ನೆಮ್ಮದಿಯಿಂದ ಇರಲು ಕಾರಣರಾದವರ ಸ್ಮರಣೆಯೂ ನಮಗೆ ಅಗತ್ಯ. ನಾವು ಆತ್ಮ ನಿರ್ಭರ ಭಾರತವನ್ನು ನಿರ್ಮಿಸಬೇಕು. ಸ್ವಾಭಿಮಾನ ಕಳಚಿಕೊಂಡು ಉಚಿತ ಗ್ಯಾರೆಂಟಿಗಳಿಗೆ ಜೋತು ಬೀಳಬಾರದು. ಪುಗ್ಸಟ್ಟೆ ಸಿಕ್ಕರೆ ಅದರ ಬೆಲೆ ನಮಗೆ ಅರಿವಿರುವುದಿಲ್ಲ. ಹತ್ತು ರೂಪಾಯಿಯಾದರೂ ನಾವು ದುಡಿದು ತಂದಾಗಲೇ ಅದರ ಬೆಲೆ ನಮಗೆ ಅರಿವಿಗೆ ಬರುತ್ತದೆ ಎಂದರು.
ಲೋಕಧ್ವನಿ ಸುದ್ದಿ ಸಂಪಾದಕಿ ವಿನುತಾ ಹೆಗಡೆ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾಗುತ್ತ ಸಾಗಿದೆ. ಇದು ಮುಂದುವರಿಯಬೇಕು. ಆದರೆ ಇಂಥ ಕಾರ್ಯಕ್ರಮಗಳು ಮಾತ್ರ ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಾಧ್ಯ. ಯಾರಿಂದ ಬಂದಿದೆ, ಯಾರು ಕೊಟ್ಟಿದ್ದಾರೆ ಈ ಯೋಜನೆ ಎನ್ನುವುದು ಎಲ್ಲರಿಗೂ ಅರ್ಥವಾಗಬೇಕು. ನಮ್ಮ ವಿಕಸಿತ ಭಾರತದ ಸಂಕಲ್ಪಕ್ಕೆ ನಾವೂ ಜತೆಯಾಗಿ ಕೈಜೋಡಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಕಾರದ ಪ್ರಯೋಜನವನ್ನು ಪಡೆಯುವಂತಾಗಬೇಕು ಎಂದರು.
ಗ್ರಾಪಂ ಸದಸ್ಯ ಟಿ.ಎಂ ಹೆಗಡೆ ಮಾತಾನಾಡಿ, ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ ಇಂಥ ಕಾರ್ಯಕ್ರಮಗಳು ಜನರಿಗೆ ತಲುಪಿಸುವಲ್ಲಿ ಸಹಾಯಕವಾಗಿವೆ ಎಂದರು.
ಬ್ಯಾಂಕ್ ವ್ಯವಸ್ಥಾಪಕ ಶ್ಯಾಮಕುಮಾರ ಮಾತನಾಡಿ, ಪ್ರಧಾನಮಂತ್ರಿಯವರ ಕನಸಿನ ಭಾರತದಿಂದ ಪ್ರತೀ ಗ್ರಾಮವೂ ವಿಕಸಿತವಾಗುವುದು. ಗ್ರಾಮಗಳು ವಿಕಸಿತವಾದರೆ ದೇಶವೂ ಅಭಿವೃದ್ಧಿ ಹೊಂದುತ್ತದೆ. ಎರಡು ತಿಂಗಳು ನಡೆಯುವ ಈ ಯಾತ್ರೆ ಜನರಲ್ಲಿ ಜಾಗೃತಿ ಹಾಗೂ ಸೌಲಭ್ಯವನ್ನು ತಲುಪಿಸುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲತಾ ಶೇಟ್ ಮಾತನಾಡಿದರು. ಶಿರಸಿಯ ಉಜ್ವಲ ಯೋಜನಾಧಿಕಾರಿ ಗಣೇಶ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.