ಅಂಕೋಲಾ: ಸಶಕ್ತ ಮತ್ತು ಅತ್ಯುತ್ತಮ ಸಮಾಜದ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಸಿವಿಲ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಧೀಶ ಮನೋಹರ ಎಂ ಹೇಳಿದರು.
ರವಿವಾರ ಜಿಲ್ಲಾ ನೋಟರಿಗಳ ಸಂಘ ಅಂಕೋಲಾ, ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ ಮತ್ತು ವಕೀಲರ ಸಂಘ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಅಜ್ಜಿಕಟ್ಟಾದ ಕ್ರಿಸ್ತ ಮಿತ್ರ ಆಶ್ರಮದಲ್ಲಿ ನಡೆದ ವಕೀಲರ, ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮದ ಪ್ರಯುಕ್ತ ಅನಾಥಾಶ್ರಮದ ವೃದ್ಧರಿಗೆ ಭೋಜನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ವಕೀಲರಾದವರು ಎಲ್ಲ ವಿಚಾರಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಬಡವರ, ವೃದ್ಧರ, ವಿದ್ಯಾರ್ಥಿಗಳ, ಅಶಕ್ತರ, ನೊಂದವರ ಹೀಗೆ ಎಲ್ಲ ರೀತಿಯ ಜನಸಾಮಾನ್ಯರ ಸಮಸ್ಯೆಯ ಎಲ್ಲ ವಿಚಾರಗಳನ್ನೂ ತಿಳಿದು ಅವರಿಗೆ ಸಹಾಯವಾಗುವ ಹಾಗೂ ನ್ಯಾಯ ಸಿಗುವ ಹಾಗೆ ಕೆಲಸ ಮಾಡಬೇಕಾಗುತ್ತದೆ. ವಕೀಲರು ಕೇವಲ ಪ್ರತಿಫಲಕ್ಕಾಗಿ ವೃತ್ತಿ ನಿರ್ವಹಿಸದೆ ಮಾನವೀಯ ನೆಲೆಯಲ್ಲಿಯೂ ಸೇವೆ ಸಲ್ಲಿಸುತ್ತಾರೆ ಎಂದರು.
ವಕೀಲರ ಸೇವೆ ಸಮಾಜಕ್ಕೆ ಒಂದು ಅಮೂಲ್ಯ ಸೇವೆ. ಸ್ವಾತಂತ್ರ್ಯ ಹೋರಾಟದಿಂದ ಇಂದಿನವರೆಗೂ ಅನೇಕ ಹೋರಾಟಗಳಲ್ಲಿ ವಕೀಲರೇ ಮುಂಚೂಣಿಯಲ್ಲಿದ್ದಾರೆ. ವಕೀಲರು ಖುಷಿ ಹಾಗೂ ತೊಂದರೆಯನ್ನು ಹಂಚಿಕೊಳ್ಳಲು ಸದಾ ಸಿದ್ಧರಾಗಿರುತ್ತಾರೆ. ಯಾರಾದರೂ ತೊಂದರೆಯಲ್ಲಿದ್ದರೆ ತಕ್ಷಣ ಸ್ಪಂದಿಸುತ್ತಾರೆ. ಅದೇ ರೀತಿ ಇಲ್ಲಿನ ವಕೀಲರು ಪ್ರತೀ ವರ್ಷ ನಿರ್ಗತಿಕರೊಂದಿಗೆ ವಕೀಲರ ದಿನವನ್ನು ಹಂಚಿಕೊಳ್ಳುತ್ತಿರುವದು ಶ್ಲಾಘನೀಯ ಎಂದರು.
ಆಶ್ರಮದ ವ್ಯವಸ್ಥಾಪಕ ಜಾನ್ ವರ್ಗೀಸ್ ಮಾತನಾಡಿ, ಆಶ್ರಮದ ನಿವಾಸಿಗಳಿಗೆ ಇದುವರೆಗೂ ಆಧಾರ ಕಾರ್ಡ ಲಭ್ಯವಾಗಿಲ್ಲದಿರುವದರಿಂದ ವೃಧ್ಯಾಪ್ಯ ವೇತನ ಸಿಗುತ್ತಿಲ್ಲ. ಈ ಕುರಿತು ಗಮನ ಹರಿಸುವಂತೆ ಕೇಳಿಕೊಂಡರು.
ವೇದಿಕೆಯಲ್ಲಿ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷ ನಾಗಾನಂದ ಬಂಟ, ನ್ಯಾಯವಾದಿ ಸುರೇಶ ಬಾನಾವಳಿಕರ ಉಪಸ್ಥಿತರಿದ್ದು, ಮಾತನಾಡಿದರು. ನ್ಯಾಯವಾದಿ ಉಮೇಶ ನಾಯ್ಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಮಮತಾ ಕೆರೆಮನೆ, ನ್ಯಾಯಾಲಯದ ಸಿಬ್ಬಂದಿ ಪ್ರಮೋದ, ಆಶ್ರಮದ ಮೇಲ್ವಿಚಾರಕ ಥಾಮಸ್ ಜಾನ್ ಮತ್ತು ಸಿಬ್ಬಂದಿಗಳು ಇದ್ದರು.