ನೂತನ ರಥ ನಿರ್ಮಾಣ ಸಮಿತಿಯಿಂದ ಅಭಿನಂದನಾ ಸಮಾರಂಭ – ನೂತನ ರಥ ನಿರ್ಮಾಣ ಸಮಿತಿ, ಉಪ ಸಮಿತಿ ಸದಸ್ಯರಿಗೆ ಗೌರವ ಸಮರ್ಪಣೆ
ಬನವಾಸಿ: ಪ್ರತಿಯೊಬ್ಬರ ಪ್ರೀತಿ, ವಿಶ್ವಾಸ, ಸಹಕಾರದಿಂದ ಎರಡು ವರ್ಷದ ಅಲ್ಪಾವಧಿಯಲ್ಲಿ ಬನವಾಸಿಯ ಮಧುಕೇಶ್ವರನ ಮಹಾರಥ ನಿರ್ಮಾಣವಾಗಿದೆ ಎಂದು ನೂತನ ರಥ ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷ ದಯಾನಂದ ಭಟ್ಟ ಹೇಳಿದರು.
ಅವರು ಇಲ್ಲಿಯ ಶ್ರೀ ಮಧುಕೇಶ್ವರ ದೇವಾಲಯದಲ್ಲಿ ಭಾನುವಾರ ನೂತನ ರಥ ನಿರ್ಮಾಣ ಸಮಿತಿಯು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರಥ ನಿರ್ಮಾಣದ ಬಹು ದೊಡ್ಡ ಜವಾಬ್ದಾರಿಯ ಕಾರ್ಯ ಮುಕ್ತಾಯವಾಗಿದ್ದು, ಸಂಘಟನಾತ್ಮಕವಾಗಿ ಆತ್ಮೀಯತೆಯಿಂದ ಈ ಕಾರ್ಯ ಮುಗಿದಿದೆ. ರಥ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ವೆಂಕಟೇಶ ದೀಕ್ಷಿತ ಮಾತನಾಡಿ, ಹಳೆಯ ರಥದ ಕುರಿತು ಇತಿಹಾಸ ತಿಳಿದಿದ್ದೇವೆ. ಆದರೆ ಅದರ ಸಾಕ್ಷಿ ಯಾವುದು ಉಳಿದಿಲ್ಲ. ನೂತನ ರಥ ಸಮರ್ಪಣೆಗೆ ನಾವೆಲ್ಲರೂ ಸಾಕ್ಷಿಯಾಗಿರುವುದು ಸಂತಸ ಮತ್ತು ರೋಮಾಂಚಕ ಕ್ಷಣವಾಗಿದೆ. ಈ ಕಾರ್ಯದಿಂದ ಇತಿಹಾಸ ಮರುಕಳಿಸಿದೆ ಎಂದರು.
ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ, ಆರ್ಥಿಕ ಸಮಿತಿಯ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ, ಊಟೋಪಾಚಾರ ಸಮಿತಿಯ ಅಧ್ಯಕ್ಷ ಶ್ರೀಪಾದ ರಾಯ್ಸದ್ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ನೂತನ ರಥ ನಿರ್ಮಾಣ ಸಮಿತಿಯ ಹಾಗೂ ಎಲ್ಲ ಉಪ ಸಮಿತಿಯ ಸರ್ವ ಸದಸ್ಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರು, ರಥ ನಿರ್ಮಾಣ ಸಮಿತಿಯ ಸದಸ್ಯರು ಹಾಗೂ ಉಪ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.