ಕಾರವಾರ: ಕುಮಟಾ ತಾಲೂಕಿನ ತದಡಿಯಲ್ಲಿ ಇಕೋ ಟೂರಿಸಂ ಅಭಿವೃದ್ಧಿ ಸಂಬಂಧ ಗ್ಲೋಬಲ್ ಟೆಂಡರ್ ಕರೆಯುವಂತೆ ಕರ್ನಾಟಕ ರಾಜ್ಯ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ತದಡಿಯಲ್ಲಿ ಇಕೋ ಟೂರಿಸಂನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ ಯೋಜಿಸಿದೆ. ಈಗಾಗಲೇ ಪ್ರಾಥಮಿಕ ಯೋಜನೆ ರೂಪಿಸಲಾಗಿದ್ದು, ಮಾಸ್ಟರ್ ಪ್ಲಾನ್ ಮಾಡಲು ಗ್ಲೋಬಲ್ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ ಎಂದು ಪಾಟೀಲ್ ಅವರು ತಮ್ಮ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತದಡಿಯಲ್ಲಿ 1419 ಎಕರೆ ಈಗಾಗಲೇ ಕೆಎಸ್ಐಐಡಿಸಿ ಹೆಸರಿನಲ್ಲಿದೆ. ಇನ್ನು 400 ಎಕರೆ ಕೆಪಿಸಿ ಹೆಸರಿನಲ್ಲಿದ್ದು, ಅದನ್ನೂ ಹಸ್ತಾಂತರಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ. ತದಡಿಯಲ್ಲಿ ಸುಮಾರು 300 ಕೋಟಿ ರೂ.ಗಳನ್ನು ಖಾಸಗಿ ವ್ಯಕ್ತಿಗಳು ಹೂಡಿಕೆ ಮಾಡಬೇಕಿದೆ. ಅಲ್ಲಿ ಅತ್ಯಾಧುನಿಕ ರೆಸಾರ್ಟ್, 184 ಟ್ರಿ ಹಟ್, 70 ಹೋಟೆಲ್ ಕೊಠಡಿಗಳು, ಸ್ಟ್ ವಾಕ್, ಯೋಗ ಕೇಂದ್ರ ಮುಂತಾದವನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಯೋಜಿಸಲಾಗಿದೆ ಎಂದು ಸಚಿವರು ಈ ಹಿಂದೆ ತಿಳಿಸಿದ್ದರು. ಅದರ ಮುಂದಿನ ಹೆಜ್ಜೆ ಇದಾಗಿದೆ.