ಹೊನ್ನಾವರ: ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ವಿಶಿಷ್ಟವಾದುದಾಗಿದ್ದು, ಜಗತ್ತಿಗೇ ಮಾದರಿಯಾಗಿದೆ ಎಂದು ತಾಲೂಕಾ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ. ಕೃಷ್ಣಾ ಜಿ ಹೇಳಿದರು.
ಅವರು ಆಸ್ಪತ್ರೆಯಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಿಗೆ ಸಂವಿಧಾನ ಪೀಠಿಕೆಯ ಅಂಶಗಳ ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡಿದರು. ಸಂವಿಧಾನ ಪೀಠಿಕೆಯಲ್ಲಿಯೇ ಇಡೀ ಭಾರತದ ಜನರ ಆಶೋತ್ತರಗಳು ಒಳಗೊಂಡಿದೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿನ ಸಂವಿಧಾನಗಳಲ್ಲಿ ಸರ್ವಾಧಿಕಾರಕ್ಕೆ, ಧಾರ್ಮಿಕ ಅಸಮಾನತೆಗೆ, ತಾರತಮ್ಯಗಳ ಅಂಶಗಳನ್ನು ಕಾಣಬಹುದಾಗಿದೆ. ಆದರೆ ನಮ್ಮ ಸಂವಿಧಾನ ಎಲ್ಲರ ಒಳಿತನ್ನು ಒಳಗೊಂಡ ಶ್ರೇಷ್ಠ ಸಂವಿಧಾನವಾಗಿದೆ. ನಾವು ಇಂದು ಉತ್ತಮ ಸ್ಥಿತಿಯಲ್ಲಿರುವುದಕ್ಕೆ ನಮ್ಮ ಸಂವಿಧಾನವೇ ಕಾರಣ. ಎಲ್ಲರೂ ಸಂವಿಧಾನದ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.