Slide
Slide
Slide
previous arrow
next arrow

ದೇಶ ಸೇವೆಯನ್ನು ಹೀಗೂ ಮಾಡಬಹುದು.. ನೆನಪಿಡಿ !!

300x250 AD

ಕಾಯಿನ್ ಬ್ಯಾನ್ ಅಂತೆ-ಕAತೆ ನಂಬಬೇಡಿ | 10 ರೂಪಾಯಿ ನಾಣ್ಯದ ವ್ಯವಹಾರಕ್ಕಿಲ್ಲ ಯಾವುದೇ ಅಡ್ಡಿ !

‘ಸತ್ಯ’ ಮನೆಯಿಂದ ಹೊರಡುವ ಹೊತ್ತಿಗಾಗಲೇ ‘ಸುಳ್ಳು’ ಊರನ್ನೆಲ್ಲಾ ಸುತ್ತಿ ತಾನೇ ಸತ್ಯವೆಂದು ನಂಬಿಸಿ ವಾಪಾಸ್ ಮನೆಗೆ ಬಂದಿತ್ತAತೆ’ ಹೀಗೊಂದು ಮಾತಿದೆ. ಬಹುತೇಕ ವಿಷಯಗಳಲ್ಲಿ ಇದು ನಿಜ ಎನಿಸಿದ್ದಿದೆ. ಧನಾತ್ಮಕ ವಿಷಯಕ್ಕಿಂತ ಋಣಾತ್ಮಕ ಸುಳ್ಳು ಸುದ್ದಿಗಳು ಬಹುಬೇಗನೇ ಜನರನ್ನು ತಲುಪುತ್ತವೆ ಮತ್ತು ಜನರೂ ಅದನ್ನೇ ಸತ್ಯವೆಂದು ಒಮ್ಮೆಯೂ ಪರಿಶೀಲಿಸದೇ ಒಪ್ಪಿಬಿಡುತ್ತಾರೆ. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸಮಸ್ಯೆ ಉಂಟು ಮಾಡಿದ ಸುಳ್ಳು ಸುದ್ದಿಗಳಲ್ಲಿ 10 ರೂಪಾಯಿ ನಾಣ್ಯ ಅನಧಿಕೃತವಾಗಿದೆ. ಅದನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದೆ ಎಂಬ ಘನಘೋರ ಸುಳ್ಳಿನ ಸುದ್ದಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಯಾರೋ ವಿವೇಕವಿಲ್ಲದ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಸಮಸ್ತ ಸಮಾಜ ಇಂದು ಬೆಲೆ ತೆರುವ ಪರಿಸ್ಥಿತಿ ಬಿಗಡಾಯಿಸಿದೆ.


ಹೌದು, ಜುಲೈ 2016 ರಲ್ಲಿ ದೇಶದೆಲ್ಲೆಡೆ ಹರಡಿದ ಸುಳ್ಳು ವದಂತಿಯ ಪರಿಣಾಮವಾಗಿ 10 ರೂಪಾಯಿ ನಾಣ್ಯವನ್ನು ಕೇಳುವವರೇ ಇಲ್ಲದಂತಾಗಿದೆ. ಈಗಲೂ ಸಹ ಹಲವೆಡೆ ಅಂಗಡಿಕಾರರು ನೀಡಿದರೆ ಜನರಂತೂ ಮಾರುದ್ದ ದೂರ ಕೈ ಮಾಡಿ ನಾಣ್ಯ ಬೇಡ ಎನ್ನುತ್ತಾರೆ. ಹರಿದ ನೋಟನ್ನಾದರೂ ಕೊಡಿ, ಆದರೆ ಜಗಮಗಿಸುವ ನಾಣ್ಯ ಮಾತ್ರ ಬೇಡವಾಗಿದೆ. ಯಾರೋ ತಿಳಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ 10 ರೂಪಾಯಿ ನಾಣ್ಯ ಬ್ಯಾನ್ ಆಗಿದೆ ಎಂದು ಫೇಕ್ ಸುದ್ದಿ ಹರಡಿದ್ದರ ಪರಿಣಾಮ, ಇಂದು ರಾಜ್ಯದ ಬಹುತೇಕ ಮಾರುಕಟ್ಟೆಯಲ್ಲಿ 10 ರೂಪಾಯಿ ನಾಣ್ಯಕ್ಕೆ ಬೆಲೆಯಿಲ್ಲದಂತಾಗಿದೆ. ಬುದ್ಧಿವಂತರ ಜಿಲ್ಲೆಯೆನಿಸಿರುವ ಉತ್ತರ ಕನ್ನಡವೂ ಇದಕ್ಕೆ ಹೊರತಾಗಿಲ್ಲ ಎಂಬುದು ನಾಚಿಗೇಡಿನ ಸಂಗತಿ.


ಸ್ಥಳೀಯವಾಗಿ ವ್ಯವಹಾರದಲ್ಲಿ ತೀವ್ರ ತೊಂದರೆ:
ಇದರ ನೇರ ಪರಿಣಾಮ ಸ್ಥಳೀಯ ಅಂಗಡಿಕಾರರು, ವ್ಯಾಪಾರಸ್ಥರ ಮೇಲೆ ಕಾಣಿಸತೊಡಗಿದೆ. ಹೊಸದಾಗಿ 10 ರೂ. ಮುಖಬೆಲೆಯ ನೋಟುಗಳು ದೊರಕುತ್ತಿಲ್ಲ. ಚಿಲ್ಲರೆ ನೀಡುವಾಗ 10 ರೂಪಾಯಿ ನೋಟಿನ ಸಮಸ್ಯೆ ಹೆಚ್ಚುತ್ತಿದೆ. ಸ್ಥಳೀಯ ಬ್ಯಾಂಕ್ ನಲ್ಲಿಯೂ ಸಹ ಹತ್ತು ರೂಪಾಯಿಯ ನೋಟುಗಳು ಸಾಕಷ್ಟು ಸಿಗುತ್ತಿಲ್ಲ. ಬದಲಾಗಿ 10 ರೂಪಾಯಿ ಮುಖಬೆಲೆಯ ನಾಣ್ಯಗಳು ಯಥೇಚ್ಛವಾಗಿ ದೊರೆಯುತ್ತಿದ್ದರೂ ಸಹ ಅಂಗಡಿಕಾರರು ತೆಗೆದುಕೊಂಡು ವ್ಯವಹರಿಸಲು ಮನಸ್ಸು ಮಾಡುತ್ತಿಲ್ಲ. ಒಂದು ವೇಳೆ ವ್ಯಾಪಾರಸ್ಥರು ತೆಗೆದುಕೊಂಡರೂ ಜನರು ನಾಣ್ಯವನ್ನು ತೆಗೆದುಕೊಳ್ಳದಿರುವುದು ತೀವ್ರ ಸಮಸ್ಯೆಯನ್ನುಂಟುಮಾಡಿದೆ.
ಈ ಕುರಿತಂತೆ ಉತ್ತರ ಕನ್ನಡ ಜಿಲ್ಲೆಯ ಖ್ಯಾತ ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಡಾ. ರವಿಕಿರಣ ಪಟವರ್ಧನರವರು ಫೇ. 2, 2023 ರಂದು ಸಂಬ0ಧಪಟ್ಟ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಫೇ.13, 2023 ರಂದು ಡಿಪಾರ್ಟ್ಮೆಂಟ್ ಆಪ್ ಕರೆನ್ಸಿ ಮ್ಯಾನೆಜ್‌ಮೆಂಟ್ ನಿಂದ ಉತ್ತರವೂ ದೊರೆತಿದ್ದು, ದೇಶದಲ್ಲಿ ರೂ. 10 ರೂಪಾಯಿಯ ಯಾವುದೇ ನಾಣ್ಯವನ್ನು ಬ್ಯಾನ್ ಮಾಡಲಾಗಿಲ್ಲ. ಎಲ್ಲ ಬ್ಯಾಂಕ್ ಅಥವಾ ಇನ್ನಿತರ ಯಾವುದೇ ಸಂಸ್ಥೆ, ಅಂಗಡಿಗಳು, ಜನರು ನಾಣ್ಯವನ್ನು ನಿರಾಕರಿಸುವಂತಿಲ್ಲ ಎಂದು ಅಧಿಕೃತವಾಗಿ ಮಾಹಿತಿ ನೀಡಿತ್ತು. ಇಷ್ಟಾಗಿಯೂ ಸಹ ಜನರಲ್ಲಿ ಒಂದಷ್ಟು ಜಾಗೃತಿ ನಡೆದರೂ ಇನ್ನೂ ಬಹುತೇಕರು ನಾಣ್ಯದ ಬಗ್ಗೆ ಅಸಡ್ಡೆ ತೋರುತ್ತಿರುವುದು ಕಳವಳಕಾರಿ ವಿಷಯ.


ಅಂಕೋಲಾದ ವ್ಯಾಪಾರಸ್ಥರಿಂದ ಬದಲಾವಣೆ ಗಾಳಿ:
ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯಗಳನ್ಮು ವಿನಾಕಾರಣ ಬೇಡವೆನ್ನುವುದು ನೇರವಾಗಿ ದೇಶದ್ರೋಹ ಎನಿಸದಿದ್ದರೂ, ಅದರಿಂದ ಸಮಾಜಕ್ಕೆ ತೀವ್ರ ಹಾನಿಯುಂಟಾಗುತ್ತದೆ. ಆ ಮೂಲಕ ದೇಶದ ಪ್ರಗತಿಗೆ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ 10 ರೂಪಾಯಿ ನಾಣ್ಯ ವ್ಯವಹರಿಸುವರ ಮೂಲಕ ದೇಶದ ಆರ್ಥಿಕತೆಗೆ ಬಲ ನೀಡಿ. ಆ ಮೂಲಕವೂ ದೇಶಸೇವೆ ಮಾಡೋಣ ಎಂಬುದು ಹಲವರ ಅಭಿಪ್ರಾಯವಾಗಿದೆ. ಇದಕ್ಕೆ ಪೂರಕವಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಎಲ್ಲಾ ವ್ಯಾಪಾರಸ್ಥರು ಸೇರಿ ಒಂದು ಮಹತ್ವದ ನಿರ್ಣಯವನ್ನು ಕೈಗೊಂಡಿದ್ದಾರೆ. ರೂ.10ರ ನಾಣ್ಯ ಬಳಸಿ, ತಮ್ಮ ಕೈಲಾದ ದೇಶ ಸೇವೆಗೆ ಅಣಿಯಾಗೋಣವೆಂದು. ಹೀಗೆ ರಾಜ್ಯದೆಲ್ಲಡೆ ಎಲ್ಲ ವ್ಯವಹಾರಗಳನ್ನು ಮಾಡುವವರು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ, ಬ್ಯಾಂಕಿAಗ್ ಸಂಸ್ಥೆ, ಅಂಚೆ ಕಛೇರಿಯವರು ಈ ರೂಪದಲ್ಲಿಯೂ ದೇಶಸೇವೆ ಮಾಡುವಂತೆ ಜನರಿಗೂ ಪ್ರೇರೆಪಿಸ ಬೇಕಿದೆ ಎಂಬುದು ಸಾರ್ವಜನಿಕರೊಬ್ಬರ ಅಭಿಪ್ರಾಯ.
ಹಲವಷ್ಟು ವ್ಯಾಪಾರಸ್ಥರಿಂದ ಹತ್ತು ರೂಪಾಯಿ ನೋಟು ಲಭ್ಯವೇ ಇಲ್ಲ ಎಂದು ಶಿರಸಿ ಪೇಟೆಯಲ್ಲಿ ಮಾತನಾಡುತ್ತಿದ್ದಾರೆ. ಹಾಗಂತ ವಸ್ತು ಸ್ಥಿತಿಯನ್ನು ಖಚಿತ ಮಾಹಿತಿ ತಿಳಿಯಲು ಶಿರಸಿಯ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಾಗ ಪ್ರತಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಹತ್ತು ರೂಪಾಯಿ ನೋಟು ಲಭ್ಯವಿಲ್ಲ ಎನ್ನುವುದು ಖಚಿತವಾಯಿತು. ಆದರೆ ರೂ.10 ನಾಣ್ಯ ತುಂಬಿ ತುಳುಕುತ್ತಿದೆ ಎನ್ನುವ ಮಾಹಿತಿಯು ಅಷ್ಟೇ ಕೂಡಲೇ ಬಹಿರಂಗವಾಯಿತು. ಒಂದು ಬೃಹತ್ ರಾಷ್ಟ್ರೀಕೃತ ಬ್ಯಾಂಕಲ್ಲಿ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ರೂ.10 ನಾಣ್ಯಗಳಿವೆ ಎಂಬ ಮಾಹಿತಿ ಅನಧಿಕೃತವಾಗಿ ತಿಳಿಯಿತು. ಹಾಗಾದರೆ 10 ರೂಪಾಯಿ ಚಿಲ್ಲರೆ ಸಮಸ್ಯೆ ಇಲ್ಲವೇ ಇಲ್ಲವಲ್ಲ ಎಂದು ಅನಿಸಿತು. ಹೌದು ಖಂಡಿತವಾಗಿಯೂ ರೂ.10 ಚಿಲ್ಲರೆ ಸಮಸ್ಯೆಗೆ ಅತ್ಯಂತ ಸುಲಭವಾಗಿ ಪರಿಹಾರ ಕಾಣಬಹುದು. ಕೆಲವು ತಿಂಗಳ ಹಿಂದೆ ಶಿರಸಿಯ ಡಾ. ರವಿಕಿರಣ ಪಟವರ್ಧನ್ ಅವರು ಭಾರತ್ ಸರಕಾರದ ಹಣಕಾಸು ಇಲಾಖೆಗೆ ನೇರವಾಗಿ ಪತ್ರ ಬರೆದು ಈ ಬಗ್ಗೆ ಮಾಹಿತಿ ಪಡೆದಿದ್ದರು, ಆ ಮಾಹಿತಿಯಂತೆ ರೂ.10 ನಾಣ್ಯ ಸಂಪೂರ್ಣವಾಗಿ ಅಧಿಕೃತ ಹಾಗೂ ಚಲಾವಣೆಯಲ್ಲಿ ಇದೆ ಎನ್ನುವುದು. ಅದರಂತೆ ಅವರು ಭಾರತೀಯ ರಿಸರ್ವ್ ಬ್ಯಾಂಕಿಗೂ ಕೂಡ ಈ ಚಲಾವಣೆಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಕೇಳಿದ್ದರು ನಾಣ್ಯ ಸಂಪೂರ್ಣವಾಗಿ ಅಧಿಕೃತ ಹಾಗೂ ಚಾಲ್ತಿಯಲ್ಲಿದೆ ಅದನ್ನ ತೆಗೆದುಕೊಳ್ಳುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದಕ್ಕೆ ಅಧಿಕೃತವಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ದೂರು ನೀಡಿ ಎಂದು ಕೂಡ ಅವರಿಗೆ ತಿಳಿಸಿದ್ದರಂತೆ. ಅವರ ಕ್ಲಿನಿಕ್‌ನಲ್ಲಿ ನಾವು ಹತ್ತು ರೂಪಾಯಿ ನಾಣ್ಯ ಸ್ವೀಕರಿಸುತ್ತೇವೆ ಎಂಬ ಸೂಚನೆಯನ್ನು ಬರೆದು ಇಟ್ಟಿರುತ್ತಾರೆ. ಅದರ ಜೊತೆಗೆ 10 ರೂಪಾಯಿ ನಾಣ್ಯ ಪಡೆಯುವುದು ದೇಶ ಸೇವೆ ಎಂಬ ವಾಕ್ಯವು ಅದರ ಜೊತೆಗೆ ಇದೆ. ಆ ಬಗ್ಗೆ ವಿಚಾರಿಸಿದರೆ ಭಾರತ ಸರ್ಕಾರಕ್ಕೆ ನೋಟು ತಯಾರಿಸಿ ಬಳಸಿದರೆ ಅದರ ಆಯುಷ್ಯ ಕಡಿಮೆ. ಆದರೆ ನಾಣ್ಯದ ಆಯುಷ್ಯ ಬಹುವರ್ಷ. ಆದ್ದರಿಂದ ಇದು ದೇಶ ಸೇವೆಗೆ ಪ್ರತಿಯೊಬ್ಬರ ಅಳಿಲು ಸೇವೆಯಾಗಬಹುದು ಎಂಬುದು ಶಿರಸಿಯ ವ್ಯಾಪಾರಸ್ಥರೊಬ್ಬರ ಅಭಿಪ್ರಾಯ.

300x250 AD


10 ರೂ. ನಾಣ್ಯ ಭಾರ ಎಂಬ ಮನಸ್ಥಿತಿ ಬೇಡ:
ಈ ಮೊದಲು ನಮ್ಮೆಲ್ಲರ ಜೇಬು ಅಥವಾ ಪರ್ಸಿನಲ್ಲಿ 1,2 ಮುಖಬೆಲೆಯ ನಾಣ್ಯಗಳು ಹೇಗೆ ಇಟ್ಟುಕೊಂಡಿದ್ದೆವೋ, ಅದೇ ರೀತಿಯಲ್ಲಿ 10 ರೂ. ನಾಣ್ಯವನ್ನೂ ಇಟ್ಟುಕೊಳ್ಳಬಹುದು. ಮತ್ತು ವ್ಯವಹಾರದಲ್ಲಿ ಹೆಚ್ಚು ಕಡೆ ಬಳಸುವುದರಿಂದ ಆ ನಾಣ್ಯವೆಂದಿಗೂ ಭಾರ ಎನಿಸದು. ಎಲ್ಲದಕ್ಕೂ ಮೊದಲು ನಮ್ಮ ಮನಸ್ಸು ಬದಲಾಗಬೇಕು. ಜನರ ಮನಸ್ಸು ಬದಲಾದರೆ ಮಾತ್ರ ನಾಣ್ಯದ ವ್ಯವಹಾರ ಸುಲಭ. ಆ ಮೂಲಕ ದೇಶದ ಅಭಿವೃದ್ಧಿ ಸಾಧ್ಯ.


ನೋಟಿಗಿಂತ ನಾಣ್ಯದ ಆಯಸ್ಸು ಜಾಸ್ತಿ:
ಆರ್ಬಿಐ ಮಾಹಿತಿ ಪ್ರಕಾರ 10 ರೂ ಮುಖಬೆಲೆಯ ಒಂದು ನೋಟನ್ನು ಮುದ್ರಿಸಲು ಅಂದಾಜು 96 ಪೈಸೆಯಷ್ಟು ಖರ್ಚು ಬರುತ್ತದೆ. ಮತ್ತು ಅದರ ಆಯಸ್ಸು ಕೇವಲ 9-10 ತಿಂಗಳು ಮಾತ್ರ. ಆದರೆ ನಾಣ್ಯಗಳು ಹಾಗಲ್ಲ. ಬಹುವರ್ಷಗಳ ಕಾಲ ಬಾಳಿಕೆಯಲ್ಲಿರುತ್ತವೆ. ಹತ್ತು ರೂ. ಮುಖಬೆಲೆಯ ನಾಣ್ಯವನ್ನು ಮುದ್ರಿಸಲು ಸುಮಾರು ರೂ. 5.54 ಪೈಸೆಯಷ್ಟು ಖರ್ಚು ಬರುತ್ತದೆಯಾದರೂ, ಬಾಳಿಕೆ ಬಹಳ ಕಾಲವಿರುವುದರಿಂದ ನಾಣ್ಯಗಳು ಹೆಚ್ಚು ಉತ್ತಮ.


ನಿರಾಕರಿಸಿದರೆ ಜೈಲುವಾಸದ ಸಾಧ್ಯತೆ:
ವಿನಾಕಾರಣ ಇಂತಹ ನಾಣ್ಯಗಳನ್ನು ಯಾವುದೇ ಇಲಾಖೆ, ಸಂಸ್ಥೆ ಅಥವಾ ಜನಸಾಮಾನ್ಯರು ವ್ಯವಹಾರದಲ್ಲಿ ನಿರಾಕರಿಸುವಂತಿಲ್ಲ. ಒಂದು ವೇಳೆ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ಸೆಕ್ಷನ್. 124ಅ ಪ್ರಕಾರ ಮೂರು ವರ್ಷದವರೆಗೆ ಜೈಲುವಾಸ ಅಥವಾ ದಂಡವನ್ನು ವಿಧಿಸಬಹುದಾಗಿದೆ.


ಜಾಗೃತಿಯ ಅಗತ್ಯವಿದೆ:
ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಬ್ಯಾಂಕ್ ನೌಕರರು ಹಾಗು ಸ್ಥಳೀಯ ಸಹಕಾರಿ ಸಂಘ-ಸAಸ್ಥೆಗಳು ಈ ನಿಟ್ಟಿನಲ್ಲಿ ಅತ್ಯಂತ ಕಳಕಳಿಯಿಂದ ಜನರನ್ನು ಜಾಗೃತಗೊಳಿಸಬೇಕು. ಆ ಮೂಲಕ ದೇಶದ ಆರ್ಥಿಕತೆ ಬಲಪಡಿಸುವಲ್ಲಿ ನಮ್ಮಿಂದಾಗುವ ಕಿರು ಸಹಾಯವನ್ನು ಮಾಡಬೇಕಿದೆ.

Share This
300x250 AD
300x250 AD
300x250 AD
Back to top