ಭಟ್ಕಳ: ಪಾಳು ಬಿದ್ದ ಸುಮಾರು 70 ರಿಂದ 80 ಅಡಿ ಆಳದ ಬಾವಿಯಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಕೋಟಖಂಡ ಮಾರುಕೇರಿಯಲ್ಲಿ ನಡೆದಿದೆ.
ಆಕಳು ಮೇವು ತಿನ್ನಲು ಹೋದ ವೇಳೆಯಲ್ಲಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿದ್ದು, ಅದನ್ನು ಗಮನಿಸಿದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಹೆಗಡೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾವಿಯಲ್ಲಿರುವ ಆಕಳನ್ನು ಮೇಲೆ ಎತ್ತಲು ಪ್ರಯತ್ನಿಸಿದ್ದಾರೆ. ಆದರೆ ಬಾವಿಯಲ್ಲಿ ಆಮ್ಲಜನಕ ಕೊರತೆ ಇರುವುದನ್ನು ಗಮನಿಸಿದ ಸಿಬ್ಬಂದಿ ಬಾವಿಗೆ ನೀರು ಹಾಯಿಸಿ, ಹಗ್ಗ ಹಾಗೂ ಹೋರ್ಸ್ ಸಹಾಯದಿಂದ ಆಕಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಗಜಾನನ ದೇವಾಡಿಗ, ಸುಧಾಕರ ದೇವಾಡಿಗ, ಶಿವ ಪ್ರಸಾದ ನಾಯ್ಕ, ನಾರಾಯಣ ಪಟಗಾರ, ಸೋಮನಾಥ ನಾಯ್ಕ, ಚೇತನ ಪಾಟೀಲ್, ಶಂಕರ್ ಲಮಾಣಿ ಇದ್ದರು.