ಶಿರಸಿ: ನಮ್ಮ ದೇಶದ ಸಂವಿಧಾನ ಶ್ರೇಷ್ಠ ಸಂವಿಧಾನವಾದರೂ ಅದರ ಆಶಯಗಳಿಗೆ ಧಕ್ಕೆ ತರುವಂಥ ಘಟನೆಗಳು ಹೆಚ್ಚುತ್ತಿದ್ದು, ಇದು ನಿಜವಾದ ಅರ್ಥದಲ್ಲಿ ಸಂವಿಧಾನಕ್ಕೆ ತೋರುತ್ತಿರುವ ಅಗೌರವ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ, ಸಂವಿಧಾನ ಓದು ಕಾರ್ಯಕ್ರಮ, ರಾಜ್ಯ ಸಮಗಾರ ಹರಳಯ್ಯ ಸಂಘದ ನೂತನಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಹಾಗೂ ಸಂಘದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಂವಿಧಾನ ಪೀಠಿಕೆಯನ್ನು ಮಕ್ಕಳು ಓದಿ ತಿಳಿದುಕೊಳ್ಳಬೇಕು ಹಾಗೂ ಅಂಗಿಕರಿಸಿಕೊಳ್ಳಬೇಕು ಎಂದು ಹೇಳಿದರು.
ಸಮಗಾರ ಹರಳಯ್ಯ ಸಂಘದವರು ಪರಿಶಿಷ್ಟರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸುವುದರ ಜತೆಗೆ ನೈಜ ಫಲಾನುಭವಿಗಳನ್ನು ಗುರುತಿಸಿ ಮೊದಲು ಅವರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವ ಜವಾಬ್ದಾರಿ ಹೊರಬೇಕು. ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ನಡೆದಾಗ ಮಾತ್ರ ಸಂವಿಧಾನದ ಸಮರ್ಪಣಾ ದಿನಕ್ಕೆ ನಿಜವಾದ ಅರ್ಥ ಕಲ್ಪಿಸಿದಂತಾಗುತ್ತದೆ ಎಂದರು.
ಪರಿಶಿಷ್ಟ ಸಮಾಜದ ಹಿರಿಯರಿಗೆ ಹಾಗೂ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಗಾರ ಹರಳಯ್ಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ ದುಂಡಪ್ಪ ಬೆಟಗೇರ, ಸಂತ ರವಿದಾಸ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಅರವಿಂದ ನೇತ್ರಕ, ಸಂತರವಿದಾಸ ಸೊಸೈಟಿ ಅಧ್ಯಕ್ಷ ಅಮರ ನೇರಲಕಟ್ಟೆ, ದಲಿತ ಮುಖಂಡ ಸುಭಾಶ ಕಾನಡೆ, ಹಿರಿಯರಾದ ರಾಚಪ್ಪ ಜೋಗಳೆಕ, ಚಂದ್ರಕಾಂತ ರೇವಣಕರ್, ಕುಮಾರ ಬೋರ್ಕರ್, ನಂದನ ಬೋರ್ಕರ್, ದೀಪಕ ಕುಡಾಳಕರ್, ರಘು ಕಾನಡೆ ಇದ್ದರು. ರಾಜು ಶಿರ್ಸಿಕ ಸ್ವಾಗತಿಸಿದರು. ಕಾವ್ಯ ಸಿರ್ಸಿಕ ನಿರ್ವಹಿಸಿದರು.