ಮುಂಡಗೋಡ: ತಾಲ್ಲೂಕಿನ ಕಾತೂರ ಅರಣ್ಯ ವಲಯ ವ್ಯಾಪ್ತಿಯ ಕೊಳಗಿ ಸಮೀಪ ಕಾಡಾನೆಗಳ ಕಾಟ ಮುಂದುವರಿದಿದ್ದು, ಸೋಮವಾರ ರಾತ್ರಿ ಒಂಟಿಸಲಗವೊಂದು ತೋಟ, ಗದ್ದೆಗೆ ನುಗ್ಗಿ ಬೆಳೆ ಹಾನಿ ಮಾಡಿದೆ. ನಸುಕಿನ ಜಾವದವರೆಗೂ ಅತ್ತಿಂದಿತ್ತ ಓಡಾಡುತ್ತ ನಂತರ ಕಾಡಿನತ್ತ ಮುಖ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗ್ರಾಮದಿಂದ ಅನತಿ ದೂರದಲ್ಲಿರುವ ಭತ್ತ, ಗೋವಿನಜೋಳ ಗದ್ದೆಗಳಿಗೆ ಕಾಡಾನೆ ಲಗ್ಗೆಯಿಟ್ಟಿದೆ. ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಯನ್ನು ತಿಂದು, ತುಳಿದು ಹಾನಿ ಮಾಡಿದೆ. ಸನಿಹದ ಅಡಿಕೆ, ಬಾಳೆ ತೋಟಕ್ಕೂ ನುಗ್ಗಿರುವ ಈ ಆನೆ, ಮನಸೋ ಇಚ್ಛೆ ಬಾಳೆ ಗಿಡಗಳನ್ನು ಮುರಿದು ಹಾಕಿದೆ. ರೈತರು ಕಾಡಾನೆಗೆ ಬೆಳಕು ಬಿಡುತ್ತ, ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಒಂಟಿ ಸಲಗವು ರೈತರನ್ನೇ ಹೆದರಿಸುತ್ತ, ಯಾವುದೇ ಅಡೆತಡೆಯಿಲ್ಲದೇ ಬೆಳೆ ಹಾನಿ ಮಾಡುವುದನ್ನು ಮುಂದುವರಿಸಿದೆ. ಕಾಡಾನೆಯನ್ನು ಓಡಿಸಲು ರೈತರು ಎಷ್ಟೇ ಪ್ರಯತ್ನಿ ಮಾಡಿದರೂ, ಸಲಗವು ಹೊಟ್ಟೆ ತುಂಬುವಷ್ಟು ತಿಂದ ನಂತರವೇ ಕಾಡಿನ ದಾರಿ ಹಿಡಿಯಿತು.
‘ಫಸಲು ಬಿಡುವ ಹಂತದಲ್ಲಿದ್ದ ಬಾಳೆ ಗಿಡಗಳನ್ನು ಮುರಿದು ಹಾಕಿದೆ. ಭತ್ತವನ್ನೂ ತುಳಿದಿದೆ. ಮೊದಲೇ ಬರ ಬಿದ್ದು, ಅಲ್ಪಸ್ವಲ್ಪ ಬೆಳೆ ಕೈಗೆ ಬಂದಿದೆ. ಅದನ್ನೂ ಸಹ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ. ಕಾಡಾನೆಗಳು ಈ ವರ್ಷ ಮೊದಲ ಬಾರಿಗೆ ಈ ಭಾಗದಲ್ಲಿ ಪ್ರತ್ಯಕ್ಷವಾಗಿವೆ. ಒಂದು ಸಲ ತೋಟದ ರುಚಿ ಹತ್ತಿದರೆ, ಮರಳಿ ಬರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಕೊಯ್ಲಿಗೆ ಬಂದಿರುವ ಭತ್ತವನ್ನು ಯಂತ್ರಗಳಿಂದ ಕಟಾವು ಮಾಡಿಸಲಾಗುತ್ತಿದೆ. ಆನೆಗಳು ಬಂದಿವೆ ಎಚ್ಚರದಿಂದ ಇರಿ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ. ಕಾಡಾನೆಗಳು ಗದ್ದೆಗಳಿಗೆ ನುಗ್ಗಿದರೆ ರೈತರಾದರೂ ಏನು ಮಾಡಬೇಕು’ ಎಂದು ರೈತ ಶ್ರೀಕಾಂತ ಗೊಟಗೋಡಿ ಪ್ರಶ್ನಿಸಿದ್ದಾರೆ.