ಹೊನ್ನಾವರ: ಹೊನ್ನಾವರದ ಮುಗ್ವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಉತ್ಸವ ಡಿಸೆಂಬರ್ 18 ರಂದು ನಡೆಯಲಿದೆ. ಆದರೆ, ಈ ವರ್ಷ ಚಂಪಾಷಷ್ಠಿ ಉತ್ಸವದ ಮೊದಲು ನಡೆಸಲಾಗುವ ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯ ಮೂಲಕ ತಿಳಿಸಿದೆ.
ಪ್ರತಿ ವರ್ಷ ಮುಗ್ವಾದ ಚಂಪಾಷಷ್ಠಿ ಉತ್ಸವಕ್ಕೂ ಮುನ್ನ ಅಂಗಡಿ ಮುಂಗಟ್ಟು ಸ್ಥಳದ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಅಂಗಡಿ ಮುಂಗಟ್ಟುಗಳಿಗೆ ನೀಡಲು ಸ್ಥಳದ ಅಭಾವ ಇರುವುದರಿಂದ ಈ ವರ್ಷ ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಆದ ಕಾರಣ ಚಂಪಾಷಷ್ಠಿ ಉತ್ಸವದ ದಿನದಂದು ವ್ಯಾಪಾರಸ್ಥರು ದೇವಾಲಯದ ಸ್ಥಳಗಳಲ್ಲಿ ಅಂಗಡಿಗಳನ್ನು ಹಾಕದಂತೆ ಮುಗ್ವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಟ್ರಸ್ಟಿಗಳು ಹಾಗೂ ಸೇವಾ ಸಮಿತಿಯವರು ವಿನಂತಿಸಿಕೊoಡಿದ್ದಾರೆ.