ಯಲ್ಲಾಪುರ: ಪ್ರತಿದಿನ ಒಂದಿಲ್ಲೊಂದು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡುವವರು, ನಿತ್ಯವೂ ಜನರ ನಡುವೆ ಇದ್ದು, ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವವರು. ಅಂತಹ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಅರ್ಥಧಾರಿಗಳಾಗಿ ತಾಳಮದ್ದಲೆಯಲ್ಲಿ ಪಾತ್ರಗಳನ್ನು ನಿರ್ವಹಿಸುವ ಮೂಲಕ ಗಮನ ಸೆಳೆದರು. ಈ ಅಪರೂಪದ ಕಾರ್ಯಕ್ರಮಕ್ಕೆ ಯಲ್ಲಾಪುರ ತಾಲೂಕಿನ ನಂದೊಳ್ಳಿಯ ಸಾರ್ವಜನಿಕ ಗಜಾನನೋತ್ಸವದ ಸಭಾಭವನ ಸಾಕ್ಷಿಯಾಯಿತು.
ತಾಲೂಕಿನ ನಂದೊಳ್ಳಿಯ ಸಾರ್ವಜನಿಕ ಗಜಾನನೋತ್ಸವದ ಸಭಾಭವನದಲ್ಲಿ ಮಂಜುನಾಥ ಸೂರಾ ನಾಯ್ಕ, ನಾರಾಯಣ ಭಟ್ಟ ಮೊಟ್ಟೆಪಾಲ ಅವರ ಸಂಯೋಜನೆಯಲ್ಲಿ ‘ವಾಲಿ ಮೋಕ್ಷ’ ತಾಳಮದ್ದಲೆ ನಡೆಯಿತು. ಸ್ಥಳೀಯ ರಾಜಕೀಯ ಮುಖಂಡರು ಅರ್ಥಧಾರಿಗಳಾಗಿ ಪಾತ್ರ ನಿರ್ವಹಿಸಿದ್ದು ವಿಶೇಷವಾಗಿತ್ತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರ, ಗೋಪಾಲಕೃಷ್ಣ ಭಟ್ಟ ಮೊಟ್ಟೆಪಾಲ, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ, ಚಂಡೆವಾದಕರಾಗಿ ನಾಗರಾಜ ಭಟ್ಟ ಕವಡಿಕೆರೆ, ಸಂಜಯ ಕೋಮಾರ ಭಾಗವಹಿಸಿದ್ದರು.
ರಾಮನಾಗಿ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಸುಗ್ರೀವನಾಗಿ ಎಲ್ಎಸ್ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ತಾರೆಯಾಗಿ ಸೊಸೈಟಿ ಉಪಾಧ್ಯಕ್ಷ ಟಿ.ಆರ್.ಹೆಗಡೆ, ವಾಲಿಯಾಗಿ ಸೊಸೈಟಿಯ ನಿರ್ದೇಶಕ ಎಂ.ಎನ್.ಭಟ್ಟ, ಹನುಮಂತನಾಗಿ ನಂದೊಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಾದೇವ ನಾಯ್ಕ ಸಮರ್ಥವಾಗಿ ಪಾತ್ರ ನಿರ್ವಹಿಸಿದರು. ಪ್ರತಿನಿತ್ಯ ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡುವ ಮುಖಂಡರು, ಪ್ರಸಂಗದ, ಪದ್ಯದ ಚೌಕಟ್ಟಿನಲ್ಲಿ ಅರ್ಥಗಾರಿಕೆ ಮಾಡುವ ಮೂಲಕ ಸೇರಿದ ಜನರ ಮೆಚ್ಚುಗೆ ಗಳಿಸಿದರು.