ಶಿರಸಿ: ಇಲ್ಲಿನ ವಿಶ್ವಶಾಂತಿ ಸೇವಾ ಟ್ರಸ್ಟ್ ಹಮ್ಮಿಕೊಳ್ಳುವ 12ನೇ ‘ನಮ್ಮನೆ ಹಬ್ಬ’ ಡಿಸೆಂಬರ್ 2ರಂದು ಸಂಜೆ 5ರಿಂದ ಆಯೋಜನೆಗೊಂಡಿದ್ದು, ಈ ಬಾರಿ ಹಲವು ವಿಶೇಷತೆಗಳಿಗೆ ಬೆಟ್ಟಕೊಪ್ಪದ ನಮ್ಮನೆ ವೇದಿಕೆ ಸಾಕ್ಷಿಯಾಗಲಿದೆ.
ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಆಸಕ್ತಿ ಹೆಚ್ಚಿಸಬೇಕು, ಸಾಧಕರನ್ನು ಗೌರವಿಸಬೇಕು ಹಾಗೂ ನಮ್ಮನೆ ಹಬ್ಬ ಇದು ಎಲ್ಲರ ಮನೆ ಹಬ್ಬ ಇದು ಎಂಬ ವಿಶಾಲ ಮನೋಭಾವದಲ್ಲಿ ನಡೆಸಲಾಗುತ್ತಿದೆ. ಈ ಬಾರಿ ಕೂಡ ನೃತ್ಯ, ಸಂಗೀತ, ವಾದನ, ವಿಶ್ವಶಾಂತಿ ಸಂದೇಶದ ನೂತನ ಯಕ್ಷ ನೃತ್ಯ ರೂಪಕ ಲೋಕಾರ್ಪಣೆ, ಸಮ್ಮಾನ ಸಮಾರಂಭ ಜೊತೆಗೆ ಹೆಸರಾಂತ ಗಣ್ಯರು ಭಾಗಿಯಾಲಿರುವುದು ವಿಶೇಷವಾಗಿದೆ.
‘ಲೀಲಾವತಾರಮ್’ ಲೋಕಾರ್ಪಣೆ:
ಅಂದು ಸಂಜೆ ೫ಕ್ಕೆ ಚಿತ್ರದುರ್ಗದ ಭರತನಾಟ್ಯ ಕಲಾವಿದೆ ಕು. ಶಮಾ ಭಾಗವತ್ ಅವರಿಂದ ಭರತನಾಟ್ಯದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ. 5.15ಕ್ಕೆ ಶ್ರೀಲತಾ ಹೆಗ್ಗರ್ಸಿಮನೆ ಅವರಿಂದ ಗಾಯನ, 5.45ಕ್ಕೆ ರಾಜಾರಾಮ ಹೆಗಡೆ ಹೆಗ್ಗಾರ್ ಜಲ ತರಂಗ ವಾದನ ನಡೆಯಲಿದೆ. ಪ್ರಸಿದ್ಧ ತಬಲಾ ವಾದಕ ಗುರುರಾಜ ಆಡುಕಳ, ಹಾರ್ಮೋನಿಯಂ ವಾದಕ ಪ್ರಕಾಶ ಹೆಗಡೆ ಯಡಹಳ್ಳಿ ಎರಡೂ ಕಾರ್ಯಕ್ರಮಗಳಿಗೆ ಸಾಥ್ ನೀಡಲಿದ್ದಾರೆ.
6.15ಕ್ಕೆ ವಿಶ್ವಶಾಂತಿ ಸರಣಿಯ 9ನೇಯ ಯಕ್ಷ ನೃತ್ಯ ರೂಪಕ ‘ಲೀಲಾವತಾರಮ್’ ಇದೇ ವೇದಿಕೆಯಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ. ವಿಶ್ವಶಾಂತಿಗೆ ಯಕ್ಷಗೆಜ್ಜೆ ಕಟ್ಟಿದ ಕು.ತುಳಸಿ ಹೆಗಡೆ ಅವಳ ಏಕವ್ಯಕ್ತಿ ಮುಮ್ಮೇಳದ ಈ ರೂಪಕವು ಲೋಕ ಶಾಂತಿಗಾಗಿ ಶ್ರೀಹರಿ ನಡೆಸಿದ ಲೀಲೆಗಳನ್ನು ಪ್ರಸ್ತುತಗೊಳಿಸಲಿದೆ. ದಿ.ಎಂ.ಎ.ಹೆಗಡೆ ದಂಟ್ಕಲ್ ರಚಿಸಿದ, ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಅವರ ನಿರ್ದೇಶನದ ರೂಪಕ ಇದಾಗಿದ್ದು, ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಭಾಗವತರಾಗಿ, ಮದ್ದಲೆಯಲ್ಲಿ ಪ್ರಸಿದ್ಧ ಕಲಾವಿದ ಶಂಕರ ಭಾಗವತ್, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾದನದಲ್ಲಿ ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಲಿದ್ದಾರೆ. ರೂಪಕದ ಮೂಲ ಕಲ್ಪನೆಯನ್ನು ಚಿಂತಕ ರಮೇಶ ಹೆಗಡೆ ಹಳೆಕಾನಗೋಡ ನೀಡಿದ್ದು, ನೃತ್ಯ ಸಲಹೆ ವಿನಾಯಕ ಹೆಗಡೆ ಕಲಗದ್ದೆ, ಹಿನ್ನಲೆ ಧ್ವನಿ ಡಾ. ಶ್ರೀಪಾದ ಭಟ್ಟ, ಪೂರಕ ಶಿಕ್ಷಣ ಜಿ.ಎಸ್.ಭಟ್ಟ ಪಂಚಲಿಂಗ, ಧ್ವನಿಗ್ರಹಣ ಉದಯ ಪೂಜಾರಿ, ನಿರ್ವಹಣೆ ಗಾಯತ್ರೀ ರಾಘವೇಂದ್ರ ಮಾಡಿದ್ದಾರೆ.
ಕಣ್ಣನ್, ರಂಜನಿ ಭಾಗಿ:
ನಮ್ಮನೆ ಹಬ್ಬಕ್ಕೆ ಸಂಜೆ 7.05ಕ್ಕೆ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ಚಾಲನೆ ನೀಡಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ವಾಗ್ಮಿ, ಕನ್ನಡದ ಪೂಜಾರಿ ಎಂದೇ ಪ್ರಸಿದ್ಧರಾದ ಹಿರೇಮಗಳೂರು ಕಣ್ಣನ್ ನೆರವೇರಿಸಲಿದ್ದಾರೆ.
ದಿನ ದರ್ಶಿಕೆಯನ್ನು ವೀರಲೋಕ ಪ್ರಕಾಶನದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ ಬಿಡುಗಡೆಗೊಳಿಸಲಿದ್ದು, ಅತಿಥಿಗಳಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ವಹಿಸಿಕೊಳ್ಳುವರು.
ಇದೇ ವೇಳೆ ಸಾಧಕರಾದ ಅಕ್ಕಿ ಡಾಕ್ಟರ್ ಖ್ಯಾತಿಯ ಶಶಿಕುಮಾರ ತಿಮ್ಮಯ್ಯ ದೊಡ್ಡಬಳ್ಳಾಪುರ, ಸವ್ಯಸಾಚಿ ಕಲಾವಿದ ನಾಗೇಂದ್ರ ಭಟ್ಟ ಮೂರೂರು ಅವರಿಗೆ ನಮ್ಮನೆ ಪ್ರಶಸ್ತಿ, ಬಾಲ ಕಲಾವಿದ ಶ್ರೀವತ್ಸ ಗುಡ್ಡೆದಿಂಬಗೆ ನಮ್ಮನೆ ಕಿಶೋರ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ, ಉಪಾಧ್ಯಕ್ಷ ರಮೇಶ ಹೆಗಡೆ ಹಳೇಕಾನಗೋಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಮ್ಮನೆ ಹಬ್ಬ ಎಂದರೆ ಇದರಲ್ಲಿ ಭಾಗವಹಿಸುವ ಎಲ್ಲರ ಮನೆ ಹಬ್ಬ. ಕಳೆದು ಹೋಗುತ್ತಿರುವ ಸಂಭ್ರಮದ ಸಾಂಸ್ಕೃತಿಕ ಬದುಕನ್ನು ನಮಗೆ ನಾವೇ ಕಟ್ಟಿಕೊಳ್ಳಬಹುದಾದ ಪುಟ್ಟ ಯತ್ನ. ಈ ಹಬ್ಬಕ್ಕೆ ನಾವು ಸಾಂಕೇತಿಕ ಸಂಕಲ್ಪಿತರು ಮಾತ್ರ.
- ಗಾಯತ್ರೀ ರಾಘವೇಂದ್ರ, ಕಾರ್ಯದರ್ಶಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ