ಸಿದ್ದಾಪುರ: ವಸತಿ ಯೋಜನೆಯ ಮನೆ ಕಟ್ಟಿಕೊಳ್ಳುವ ಫಲಾನುಭವಿಗಳಿಗೆ ಯಾರಾದರು ತೊಂದರೆ ನೀಡಿದರೆ ಸಹಿಸಲಾಗುವುದಿಲ್ಲ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ಬಿಳಗಿ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ನೀಡಿ ಮಾತನಾಡಿ, ಸರ್ಕಾರದಿಂದ ಸಿಗುವ ಯೋಜನೆಯನ್ನು ಕಾಲ ಕಾಲಕ್ಕೆ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದಿದೆ. ವಸತಿ ಯೋಜನೆಯ ಫಲಾನುಭವಿಗಳು ಮನೆ ಕಟ್ಟಿಕೊಳ್ಳುವಾಗ ಯಾರು ಕೂಡ ತೊಂದರೆ ನೀಡಬಾರದು. ಮನೆ ಕಟ್ಟಲು ಬೇಕಾದ ಸಾಮಗ್ರಿಗೆ ಅಧಿಕಾರಿಗಳು ತೊಂದರೆ ನೀಡಬಾರದೆಂದು ಸೂಚಿಸಿದ್ದೇನೆ ಎಂದರು.
ಕ್ಷೇತ್ರದ ಸಮಸ್ತ ಜನತೆಯ ಜತೆ ನಿಲ್ಲುತ್ತೇನೆ. ಹೆತ್ತ ತಂದೆ-ತಾಯಿಯನ್ನು ಬೇರೆ ಹಾಕುವವರಿಗೆ ವಸತಿ ಯೋಜನೆಯಡಿ ಮನೆ ನೀಡುವಾಗ ಯೋಚಿಸಬೇಕಿದೆ. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ವಸತಿ ಯೋಜನೆಯ ಮನೆಗಳನ್ನು ಮಂಜೂರಿ ಮಾಡಿಸಿ ಬಡವರ ಬೇಡಿಕೆಗೆ ಸ್ಪಂದಿಸಲಾಗುವುದು ಎಂದರು. ಬಿಳಗಿ ಪಂಚಾಯ್ತಿಯ 76 ಫಲಾನುಭವಿಗಳಿಗೆ ಶಾಸಕ ಭೀಮಣ್ಣ ನಾಯ್ಕ ವಸತಿ ಯೋಜನೆಯ ಕಾಮಗಾರಿ ಆದೇಶ ನೀಡಿದರು.
ಗ್ರಾಮ ಪಂಚಾಯ್ತಿ ಸದಸ್ಯ ಆದರ್ಶ ಪೈ ಪ್ರಾಸ್ತಾವಿಕ ಮಾತನಾಡಿ, ಪಂಚಾಯ್ತಿಯಲ್ಲಿ ಆದಾಯದ ಮೂಲ ಸಣ್ಣದಿದೆ. ಜನರ ಬೇಡಿಕೆ ತುಂಬಾ ಇದೆ. ಪಂಚಾಯ್ತಿಗೆ ಹೆಚ್ಚಿನ ಅನುದಾನ ಕೊಡಿಸುವಂತೆ ವಿನಂತಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ಉಪಾಧ್ಯಕ್ಷೆ ಸುವರ್ಣಾ ನಾಯ್ಕ, ಸದಸ್ಯರಾದ ಆದರ್ಶ ಪೈ, ಮಾಲಿನಿ ಮಡಿವಾಳ, ರಾಜು ನಾಯ್ಕ, ವಸಂತ ನಾಯ್ಕ, ಶಾರದಾ ವಾಲ್ಮಿಕಿ, ರಂಜಿತಾ ಹರಿಜನ, ತಾಲೂಕಾ ಪಂಚಾಯ್ತಿ ಯೋಜನಾಧಿಕಾರಿ ಬಸವರಾಜ ಉಪಸ್ಥಿತರಿದ್ದರು. ಪಿಡಿಓ ಗೌರೀಶ ಹೆಗಡೆ ನಿರೂಪಿಸಿದರು. ಕಾರ್ಯದರ್ಶಿ ವೆಂಕಟಗಿರಿ ಗೌಡ ವಂದಿಸಿದರು.