ಹಳಿಯಾಳ: ನರಕ ಚತುರ್ದಶಿಯ ಮೂರನೇ ದಿನ ಗೋವರ್ಧನ ಉತ್ಸವ ಬಲಿ ಪ್ರತಿಪಾದ ಅಂಗವಾಗಿ ಪಟ್ಟಣದಲ್ಲಿ ಎತ್ತುಗಳ ಹಬ್ಬವನ್ನು ಸರ್ವಧರ್ಮಿಯರು ಭಾವೈಕ್ಯದಿಂದ ಆಚರಿಸಿದರು.
ಮಂಗಳವಾರ ಬೆಳಿಗ್ಗೆ ಪಟ್ಟಣದ ರೈತರ ಮನೆಯಲ್ಲಿಯ ಎಲ್ಲಾ ಎತ್ತುಗಳನ್ನು ಸಿಂಗರಿಸಿ ಜಂಬ್ಯಾಳ ಗಲ್ಲಿಯಲ್ಲಿ ಸೇರಿ ಅಲ್ಲಿಯ ಚಾಂದ್ ಪಂಜಾ (ಚಂದ್ರಾಮ ದೇವರ ಮಖಾನ್) ನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ತಮ್ಮ ತಮ್ಮ ಧರ್ಮದ ಅನುಸಾರವಾಗಿ ಧಾರ್ಮಿಕ ಪೂಜೆ ಸಲ್ಲಿಸಿದರು.
ನಂತರ ವಿವಿಧ ವಾದ್ಯ ಮೇಳದೊಂದಿಗೆ ನಡೆಸಲಾಗುವ ಹೋರಿ, ಎತ್ತುಗಳ ಮೆರವಣಿಗೆಗೆ ಕಸಬಾಗಲ್ಲಿ ಹಾಗೂ ಜಂಬ್ಯಾಳ ಗಲ್ಲಿಯ ಹಿರಿಯರು ಚಾಲನೆ ನೀಡಿದರು. ನಂತರ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ನಡೆಯಿತು.
ಮೆರವಣಿಗೆಯುದ್ದಕ್ಕೂ ಅನೇಕರು ಎತ್ತುಗಳಿಗೆ ತಮ್ಮ ತಮ್ಮ ಪದ್ಧತಿ ಅನುಸಾರ ಪೂಜೆ ಸಲ್ಲಿಸುವುದು ಹಾಗೂ ಹಣ್ಣು ತರಕಾರಿ ನೀಡುವುದು ಸಾಮಾನ್ಯವಾಗಿತ್ತು. ಮೆರವಣಿಗೆ ಸಾಗುವಾಗ ಪಟ್ಟಣದಲ್ಲಿಯ ಎಲ್ಲಾ ದೇವಾಲಯಗಳಿಗೆ ತೆರಳಿ ಹಣ್ಣು, ಕಾಯಿ ದೀಪ ಹಚ್ಚಿ ಜಂಬ್ಯಾಳ ಗಲ್ಲಿಯ ಹಿರಿಯರು ಪೂಜೆ ಸಲ್ಲಿಸಿದರು.
ಎತ್ತುಗಳ ಮೆರವಣಿಗೆಯಲ್ಲಿ ವಿಶೇಷವಾಗಿ ರಾಜ್ಯಮಟ್ಟದ ಭಾರಿ ಷರತ್ತುಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬಾಬಾ ಹಣಬರ ಅವರಿಗೆ ಸಂಬಂಧಿಸಿದ ಕಸಿ ಹಾಗೂ ಚಿಮಟಾ ಹೆಸರಿನ ಎತ್ತುಗಳು ಮತ್ತಿತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತವಾದ ಎತ್ತುಗಳು ಆಕರ್ಷಿಸಿದವು. ಪ್ರತಿಯೊಂದು ಗ್ರಾಮದಲ್ಲಿಯೂ ಬಲಿ ಪ್ರತಿಪಾದದ ಅಂಗವಾಗಿ ಎತ್ತುಗಳ ಆಯಾ ಗಡಿಭಾಗದವರೆಗೆ ಮೆರವಣಿಗೆ ನಡೆದು ಅಲ್ಲಿಯ ಗ್ರಾಮ ದೇವಿಗೆ ಪೂಜೆ ಸಲ್ಲಿಸಿ ತೆರಳುತ್ತಿರುವುದು ಸಂಪ್ರದಾಯವಾಗಿದೆ.
‘ವರ್ಷ ಪೂರ್ತಿ ಕೃಷಿ ಕಾಯಕಕ್ಕೆ ಬಳಸಿದ ಜಾನುವಾರಗಳಿಗೆ ಆರೋಗ್ಯವಾಗಿಡಲು ಹಾಗೂ ತಾಲ್ಲೂಕಿನಲ್ಲಿ ,ನಾಡಿನಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ ರೈತರ ಹಾಗೂ ಮತ್ತಿತರ ಎಲ್ಲಾ ಸಮುದಾಯದ ಜನರ ಜೀವನ ಸುಖಮಯವಾಗಲಿ ಎಂದು ಎತ್ತುಗಳ ಮೆರವಣಿಗೆ ನಡೆಯುವಾಗ ಆಯಾ ಮೊಹಲ್ಲಾ ಬಡಾವಣೆಗಳ ದೇವಸ್ಥಾನ ಹಾಗೂ ಮಖಾನ್ಗಳಲ್ಲಿ ಎಣ್ಣೆ ದೀಪ ಹಚ್ಚಿ ಪೂಜೆ ಸಲ್ಲಿಸುವುದು ಈ ಹಿಂದಿನ ಸಂಪ್ರದಾಯವಾಗಿದ್ದು ಅದನ್ನೇ ಪುನಃ ಎಲ್ಲಾ ಧರ್ಮದವರು ಮುಂದುವರಿಸುತ್ತಿದ್ದೇವೆ ಎಂದು ಜಂಬ್ಯಾಳಗಲ್ಲಿ, ಕಸಬಾಗಲ್ಲಿ ಮುಖಂಡರಾದ ಜಗದೀಶ ಉಪ್ಪಿನ, ಹಾಗೂ ಜಾಕೀರ್ ಲತೀಫನವರ್ ಹೇಳಿದರು.