ಅಂಕೋಲಾ: ಓರ್ವ ಶಿಕ್ಷಕರು ಸಾಧನೆ ಮಾಡಬೇಕು ಎಂಬ ಛಲವನ್ನು ತೊಟ್ಟಾಗ ಅವರ ಕರ್ತವ್ಯದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂತಹ ಉತ್ತಮ ಶಿಕ್ಷಕಿ ನಮ್ಮ ಶಾಲಾ ಮುಖ್ಯಾಧ್ಯಾಪಕಿ ಸುಜಾತಾ ನಾಯಕ ಎಂದು ವಿದ್ಯಾ ಸುಧಾರಕ ಸೇವಾ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಸುನಿಲ್ ಪೈ ಹೇಳಿದರು.
ತಾಲೂಕಿನ ಬಳಲೆಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗೌರವ ಸನ್ಮಾನದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ. ಉತ್ತಮ ಶಿಕ್ಷಕರು ಇಂದಿನ ಹಾಗೂ ಮುಂದಿನ ಸುಸಂಸ್ಕ್ರತ ಸಮಾಜ ನಿರ್ಮಿಸುವ ನಿರ್ಮಾತೃರು ಎಂದರು.
ಸನ್ಮಾನ ಸ್ವೀಕರಿಸಿದ ಸುಜಾತಾ ನಾಯಕ ಮಾತನಾಡಿ ನಾನು ಶಿಕ್ಷಣವನ್ನು ನೀಡಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗಳು ಅವರವರ ಕ್ಷೇತ್ರದಲ್ಲಿ ಬದುಕು ಕಂಡುಕೊಂಡಾಗ ನಾನು ಸಂತೃಪ್ತಿ ಪಡುತ್ತೇನೆ.ಅದೇ ನನಗೆ ಸನ್ಮಾನ.ತಾವೆಲ್ಲರೂ ಇಟ್ಟಿರುವ ಈ ಗೌರವಕ್ಕೆ ಆಭಾರಿ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ರಮೇಶ ನಾಯಕ, ನಿವೃತ್ತ ಮುಖ್ಯಾಧ್ಯಾಪಕಿ ಶಾರದಾ ನಾಯಕ,ಮತ್ತು ಗ್ರಾಮಸ್ಥರು, ಸಂಸ್ಥೆಯವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.