ಕುಮಟಾ: ತಾಲೂಕಿನ ಸೊಪ್ಪಿನಹೊಸಳ್ಳಿ ಪಂಚಾಯತ್ ವ್ಯಾಪ್ತಿಯ ಕಲವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಬಂಗಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿವೇಕ ಕೊಠಡಿಗಳನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ, ಬಂಗಣೆ ಶಾಲೆಯಲ್ಲಿ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗಿರುವ ಸ್ಮಾರ್ಟ್ ಕ್ಲಾಸ್ ರೂಮ್ ಅನ್ನು ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಶಾಸಕರು, ನನ್ನ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ ಸೇರಿದಂತೆ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದೇನೆ. ‘ವಿವೇಕ ಕೊಠಡಿ’ ಎನ್ನುವುದು ಹಿಂದಿನ ಬಿಜೆಪಿ ಸರ್ಕಾರದ ಅಪೂರ್ವ ಪರಿಕಲ್ಪನೆಯಾಗಿದ್ದು, ರಾಜ್ಯಾದ್ಯಂತ ಅಗತ್ಯವಿರುವ ಶಾಲೆಗಳಲ್ಲಿ ನೂತನ ವರ್ಗಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ತಾಲೂಕಿಗೆ ಒಟ್ಟು 27 ವಿವೇಕ ಕೊಠಡಿಗಳನ್ನು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೀಡಿದ್ದಾರೆ. ಸ್ವಚ್ಛ ಹಾಗೂ ಸುಸಜ್ಜಿತ ವರ್ಗಕೋಣೆಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಒದಗಿಸುತ್ತದೆ. ಕುಮಟಾದಿಂದ ಸುಮಾರು 35ಕಿಲೋಮೀಟರ್ ದೂರದಲ್ಲಿರುವ ಕಲವೆ ಹಾಗೂ ಬಂಗಣೆ ಗ್ರಾಮಗಳು ತೀರಾ ಹಿಂದುಳಿದ ಹಳ್ಳಿಗಳಾಗಿದ್ದರು, ಇಲ್ಲಿನ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕೃತಿಯನ್ನು ಕಲಿಸಿರುವುದು ವಿದ್ಯಾರ್ಥಿಗಳ ಶಿಸ್ತಿನಿಂದಲೇ ಗೊತ್ತಾಗುತ್ತದೆ. ಶಿಕ್ಷಕರು ಕೂಡಾ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರದ ವಿವೇಕಕೊಠಡಿಯ ಸಂಪೂರ್ಣ ಪ್ರಯೋಜನ ನಿಮ್ಮ ಊರಿಗೆ ಸಿಗುತ್ತದೆ ಎಂದು ಹೇಳಿದರು.
ತಾ. ಪಂ. ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಎಲ್. ಭಟ್, ಸೊಪ್ಪಿನಹೊಸಳ್ಳಿ ಗ್ರಾ. ಪಂ. ಅಧ್ಯಕ್ಷೆ ಶೈಲಾ ನಾಯ್ಕ ಮತ್ತು ಉಪಾಧ್ಯಕ್ಷ ಹನುಮಂತ ಗೌಡ, ಜಿ. ಪಂ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಘವೇಂದ್ರ ನಾಯ್ಕ, ಸೆಕ್ಷನ್ ಅಧಿಕಾರಿ ದೀಪಾ ಶಟಗೇರಿ, ಎ.ಪಿ.ಎಂ.ಸಿ. ಕಾರ್ಯದರ್ಶಿ ರಾಜೇಶ್, ಪಂಚಾಯತ್ ಸದಸ್ಯರಾದ ಈಶ್ವರ ಮರಾಠಿ, ತ್ರಿವೇಣಿ ಮರಾಠಿ ಹಾಗೂ ಅಬ್ದುಲ್ ಖಾದರ್, ಗ್ರಾ. ಪಂ. ಮಾಜಿ ಅಧ್ಯಕ್ಷ ವಿನಾಯಕ ಭಟ್, ಶಿಕ್ಷಣ ಸಂಯೋಜಕಿ ಜಯಶ್ರೀ ಎ. ಪಿ., ಮುಖ್ಯ ಶಿಕ್ಷಕರಾದ ರಾಮಚಂದ್ರ ಶೆಟ್ಟಿ ಮತ್ತು ಸುಬ್ರಹ್ಮಣ್ಯ ಹೆಗಡೆ, ಸಿ. ಆರ್. ಪಿ. ಈಶ್ವರ ಭಟ್, ಸೆಲ್ಕೋ ಸೋಲಾರ್ ಸಂಸ್ಥೆಯ ಚೀಫ್ ಎಕ್ಸಿಕ್ಯೂ ಟಿವ್ ಸಂತೋಷ ನಾಯ್ಕ, ಅ. ಕ. ರ. ಸೇವಾದಳದ ತಾಲೂಕಾಧ್ಯಕ್ಷ ಉದಯ ಭಟ್, ಎಸ್. ಡಿ. ಎಮ್. ಸಿ. ಅಧ್ಯಕ್ಷರಾದ ನಾರಾಯಣ ಮರಾಠಿ ಮತ್ತು ಗಣಪತಿ ಮರಾಠಿ, ಊರಿನ ಹಿರಿಯರಾದ ಶೇಷ ಜಾಯು ಮರಾಠಿ ಹಾಗೂ ಇತರರು ಇದ್ದರು.