ಹಳಿಯಾಳ: ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಎದುರಿಸುವ ಬಗೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೆಎಲ್‌ಎಸ್ ವಿಡಿಐಟಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹವಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅನುಪಮಾ ಬೆನ್ನೂರ್ ಕಾರ್ಯಕ್ರಮದಲ್ಲಿ ಹಾಜರಿದ್ದು, ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳೇನು, ಅವುಗಳನ್ನು ಸಮರ್ಥವಾಗಿ ಹೇಗೆ ಎದುರಿಸಬೇಕೆಂದು ವಿವರಿಸಿದರು. ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಕಾರ್ಯಕ್ಷಮತೆಯನ್ನು ತೋರಿಸುತ್ತಿದ್ದು, ಮಹಿಳಾ ಸಬಲೀಕರಣಕ್ಕೆ ಇದು ನಾಂದಿಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿನಿಯರು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ಕುಟುಂಬ ಹಾಗೂ ಔದ್ಯೋಗಿಕ ಕ್ಷೇತ್ರದ ಒತ್ತಡವನ್ನು ಸಮರ್ಥವಾಗಿ ಎದುರಿಸಬೇಕೆಂದು ನುಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸ್ಥಳೀಯ ವಕೀಲರಾದ ರಾಧಾರಾಣಿ ಕೊಲಂಬೆ, ಮಹಿಳಾ ಕಾನೂನುಗಳ ಬಗ್ಗೆ ವಿವರಣೆಯನ್ನು ನೀಡಿದರು. ಕೌಟುಂಬಿಕ ಹಿಂಸೆಗೆ ನ್ಯಾಯ ಒದಗಿಸಲು ಕಾನೂನಿನಲ್ಲಿರುವ ಕ್ರಮಗಳೇನು ಮತ್ತು ಮಹಿಳೆಯರಿಗಾಗಿ ಇರುವ ಕಾನೂನಿನ ನಿಬಂಧನೆಗಳನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ, ಮಹಿಳೆಯು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿರುವುದು ಪ್ರಶಂಸಾರ್ಹವಾಗಿದೆ. ತನ್ನ ರಕ್ಷಣೆಗೆ ಕಾನೂನಿನಲ್ಲಿ ನೀಡಿರುವ ನಿಬಂಧನೆಗಳ ಜ್ಞಾನ ಹೊಂದುವುದು ಅಷ್ಟೇ ಅವಶ್ಯವಾಗಿದೆ ಎಂದು ಹೇಳಿದರು.
ಮಹಾವಿದ್ಯಾಲಯವು ವಿದ್ಯಾರ್ಥಿನಿಯರಿಗಾಗಿ ಪಿಂಕ್ ಬಸ್ ಸೌಲಭ್ಯ, ವಿದ್ಯಾರ್ಥಿನಿಲಯಗಳಲ್ಲಿ ಫಿಟ್ನೆಸ್ ಕೇಂದ್ರ ಸೇರಿದಂತೆ ಅನೇಕ ಸೌಲಭ್ಯ ಒದಗಿಸಿದೆ ಎಂದು ತಿಳಿಸಿದರು. ಮಹಾವಿದ್ಯಾಲಯದ ಮಹಿಳಾ ಸಂಘದ ಸಂಚಾಲಕಿ ಡಾ.ಮೀನಲ್ ಕಲಿವಾಲ್ ಸ್ವಾಗತಿಸಿದರು. ಪ್ರೊ.ರೋಹಿಣಿ ಕಲ್ಲೂರ್ ವಂದಿಸಿದರು. ಪ್ರೊ.ಶ್ರೀಗೌರಿ ಸಂಪನ್ಮೂಲ ವ್ಯಕ್ತಿಗಳ ಕಿರುಪರಿಚಯ ನೀಡಿದರು. ಐಶ್ವರ್ಯ ನಿರೂಪಿಸಿದರು. ಮಹಾವಿದ್ಯಾಲಯದ ಮಹಿಳಾ ಸಂಘವು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.