ಹೊನ್ನಾವರ: ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಎಕ್ಸ್ರೇ ಯಂತ್ರ ಕಂಡುಹಿಡಿದ ನೆನಪಿನಾರ್ಥ ಪ್ರತಿವರ್ಷದಂತೆ ವಿಶ್ವ ರೇಡಿಯೊಗ್ರಫಿ ಡೇ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೃದಯ ತಜ್ಞರಾದ ಡಾ.ಪ್ರಕಾಶ ನಾಯ್ಕ ಮಾತನಾಡಿ ಸುಧಾರಿತ ಎಕ್ಸ್ರೇ ತಂತ್ರಜ್ಞಾನ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ಕಡಿಮೆ ಮಾಡಬಹುದು.ಟಿ.ಬಿ ಕಾಯಿಲೆಗಳನ್ನು ಗುರುತಿಸಲು ಎಕ್ಸರೇ ಮಹತ್ತರ ಪಾತ್ರ ವಹಿಸಲಿದೆ ಎಂದರು.
ಎಲಬು ಮತ್ತು ಮೂಳೆ ತಜ್ಞರಾದ ಡಾ. ರಮೇಶ ಗೌಡ ಮಾತನಾಡಿ, ಚಿಕ್ಕ ಪುಟ್ಟ ನೋವುಗಳಿಗೆ ಎಕ್ಸ್ ರೇ ಮಾಡಿಸುವ ಅವಶ್ಯಕತೆ ಇಲ್ಲ. ಪದೇ ಪದೇ ಎಕ್ಸ್ ರೇ ಗಳಿಗೆ ಒಳಗಾಗುವದರಿಂದ ನಮ್ಮ ಆರೋಗ್ಯ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು. ವೈದ್ಯಾಧಿಕಾರಿಗಳ ಶಿಫಾರಿಸ್ಸಿಲ್ಲದೆ ಎಕ್ಸ್ ರೇ ಒಳಗಾಗಬಾರದು. ತೀರ ಅವಶ್ಯಕತೆ ಇದ್ದರೆ ಮಾತ್ರ ಎಕ್ಸ್ ರೇ ಗೆ ಒಳಗಾಬೇಕು. ಸಾಕಷ್ಟು ಜನ ಒತ್ತಾಯ ಮಾಡಿ ಅವಶ್ಯಕತೆ ಇಲ್ಲದಿದ್ದರು ಎಕ್ಸ್ ರೇಗೆ ಒಳಗಾಗುತ್ತಾರೆ. ಇದು ಉತ್ತಮ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ವೈದ್ಯರು ಶಿಫಾರಸ್ಸು ಇದ್ದರೆ ಮಾತ್ರ ಎಕ್ಸ್ ರೇ ಮಾಡಿಸಿಕೊಳ್ಳಿ ಎಂದರು.
ಸ್ತ್ರೀರೋಗ ತಜ್ಞರಾದ ಡಾ. ಕೃಷ್ಣಾ ಜಿ ಮಾತನಾಡಿ ಎಕ್ಸ್ ರೇ ಯಂತ್ರದ ಬೆಳವಣಿಗೆಗೆ ಹಲವಾರು ತಂತ್ರಜ್ಞರ ಶ್ರಮ ತ್ಯಾಗ ಇದೆ. ಮೊದಲಿನ ದಿನಗಳಲ್ಲಿ ಎಕ್ಸ್ ರೇ ರೆಡಿಯೇಶನ್ನಿಂದ ಸಾಕಷ್ಟು ತಂತ್ರಜ್ಞರು ತೊಂದರೆಗೊಳಗಾಗಿದ್ದಾರೆ. ಇವತ್ತಿನ ಆಧುನಿಕತೆಯ ಯಂತ್ರಗಳು ಅಂತಹ ತೊಂದರೆಗಳನ್ನು ಕಡಿಮೆ ಮಾಡಿದೆ ಎಂದರು.
ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಾಜೇಶ ಕಿಣಿರವರು ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿರುವ ಎಕ್ಸ್ ರೇ ವಿಭಾಗವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಕ್ಸ್ ರೇ ಒಳಗಾಗುವವರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿರುವದರಿಂದ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳ ಮೇಲೆ ಒತ್ತಡ ಹೆಚ್ಚಿರುತ್ತದೆ. ಸಾರ್ವಜನಿಕರ ಸಹಕರಿಸಬೇಕು ಎಂದರು.
ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಶಶಿಕಲಾ ನಾಯ್ಕ ಎಕ್ಸ್ ರೇ ತಂತ್ರಜ್ಞರು ಜಿಲ್ಲಾ ಎಕ್ಸ್ ರೇ ಸಂಘದ ಅಧ್ಯಕ್ಷರು ಆದ ಅರುಣ ತಾಮ್ಸೆ ಯವರು ಎಕ್ಸ್ ರೇ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಎಕ್ಸ್ ರೇ ತಂತ್ರಜ್ಞರು, ಸರಕಾರಿ ನೌಕರರ ಸಂಘದ ತಾಲೂಕ ಉಪಾಧ್ಯಕ್ಷರಾದ ಚಂದ್ರಶೇಖರ ಕಳಸ ಸ್ವಾಗತಿಸಿ ಪ್ರಾಸ್ತವಿಕ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ಡಾ.ಶಿವಾನಂದ ಹೆಗಡೆ, ಡಾ. ಅನುರಾಧ, ಡಾ.ಸೋನಿಯಾ, ಡಾ.ಮಹೇಶ ಶೆಟ್ಟಿ. ಡಾ. ಗುರುದತ್ತ ಕುಲಕರ್ಣಿ ಸೇರಿದಂತೆ ವೈದ್ಯರುಗಳು, ಆಸ್ಪತ್ರೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.