ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ನೀಡಿರುವ ‘ಬಿಜೆಪಿ ಯಾರನ್ನೂ ಕೊಲೆ ಮಾಡದಿದ್ದರೆ ಸಾಕು’ ಹೇಳಿಕೆಯು ಆಘಾತಕಾರಿ, ಸಂಶಯಾಸ್ಪದ, ಜನರಲ್ಲಿ ಬೆದರಿಕೆ ಹುಟ್ಟಿಸುವ, ಶಾಂತಿಯಿಂದ ಬದುಕಲು ಕೊಡದೆ ಇರುವಂಥ ಹೇಳಿಕೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಳಿಕೆ ನೀಡುವ ಪೂರ್ವ ಅದರ ಪರಿಣಾಮ-ದುಷ್ಪರಿಣಾಮಗಳ ಬಗ್ಗೆ ಅರಿತು ಜವಾಬ್ದಾರಿ ಸ್ಥಾನದಲ್ಲಿರುವವರು ಮಾತನಾಡಬೇಕು. ವೈದ್ಯರು ಈ ಹಿಂದೆ ಭಾರತದ ಕಾನೂನೇ ಸರಿ ಇಲ್ಲ ಎಂದಿದ್ದರು. ಅವಾಗಲೂ ತಿದ್ದುಕೊಳ್ಳಬೇಕಿತ್ತು. ವೈಯಕ್ತಿಕವಾಗಿ ಅವರ ಮೇಲೆ ಗೌರವ, ಪ್ರೀತಿ ಇದೆ. ಆದರೆ ಅವರು ಈಗ ನೀಡಿರುವ ಹೇಳಿಕೆ ಸಣ್ಣದಲ್ಲ. ಅಪರಾಧ ಸ್ವರೂಪದ ಮಾತು, ಪ್ರಚೋದನಾತ್ಮಕ ಮಾತು. ಇನ್ಮುಂದೆ ಯಾರು ಯಾರನ್ನೇ ಕೊಲೆ ಮಾಡಿದರೂ ಆಪಾದನೆಯನ್ನ ಯಾರ ಮೇಲೆ ಬೇಕಾದ್ರೂ ಹೊರಿಸಬಹುದು ಎಂಬುದು ಇದರ ಅರ್ಥ ಎನಿಸುತ್ತದೆ. ಮುಂದೆ ಕೊಲೆಯಾಗುವ ಮುನ್ಸೂಚನೆ ಅವರಿಗೆ ಸಿಕ್ಕಿರಬೇಕು, ಇಲ್ಲಾ ಯಾವುದೇ ಕೊಲೆಯಾದರೂ ಬಿಜೆಪಿಯವರ ಮೇಲೆ ಹೊರಿಸುವ ಯೋಚನೆ ಮಾಡಿರಬೇಕು ಎಂದರು.
ವೈದ್ಯರಿನ್ನೂ ಜಿ.ಪಂ.ಸದಸ್ಯರೆನ್ನುವುದನ್ನೇ ತಲೆಲಿಟ್ಟುಕೊಂಡಿದ್ದಾರೆ. ಮಾನಸಿಕವಾಗಿ ಅವರು ಇನ್ನೂ ಮಂತ್ರಿಯಾಗಿ ತೇರ್ಗಡೆಯಾಗಿಲ್ಲ. ರಾಜಕಾರಣಿ ಎಂದರೆ ಅಪ್ರಬುದ್ಧ ಹೇಳಿಕೆಗಳಿಂದ ದೂರವಿರಬೇಕು. ಏನನ್ನೂ ಹೇಳುವವರು ರಾಜಕಾರಣಿ ಎಂದೆನಿಸಿಕೊಳ್ಳುವುದಿಲ್ಲ. ಏನು ಮಾತನಾಡಬೇಕು ಎನ್ನುವುದಕ್ಕಿಂತಲೂ ಏನನ್ನು ಮಾತನಾಡಬಾರದು ಎಂಬುದನ್ನ ರಾಜಕಾರಣಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಇದಕ್ಕೆಲ್ಲ ಅವರು ತಿಲಾಂಜಲಿ ಇಟ್ಟಿದ್ದಾರೆ. ಮನಸ್ಸಿಗೆ ಬಂದಿದ್ದು, ಏನು ಬೇಕಾದ್ರು ಹೇಳ್ತೇನೆ, ಏನು ಬೇಕಾದ್ರು ಮಾಡ್ತೇನೆ ಎನ್ನುವ ಮನಸ್ಥಿತಿಗೆ ಅವರು ಬಂದಿದ್ದಾರೆ ಎಂದರು.
ಬಿಜೆಪಿ ಯಾರನ್ನ ಕೊಲೆ ಮಾಡಿದೆ? ಸಿಖ್ಖರ ಹತ್ಯೆ, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವೆಲ್ಲವೂ ಕಾಂಗ್ರೆಸ್ ಅವಧಿಯಲ್ಲಿ ಆಗಿರುವುದು, ಅದಕ್ಕೆ ಉತ್ತರ ಅವರೇ ಕೊಡಬೇಕು. ಸಾವಿನ ಬಗ್ಗೆ ಉತ್ತರ ಕೊಡಬೇಕಾದ ಯಾವ ಅನಿವಾರ್ಯತೆಯೂ ಬಿಜೆಪಿಗಿಲ್ಲ. ಸಾವಿನ, ಕೊಲೆಯ ರಾಜಕಾರಣ ಮಾಡಿದವರು ನಾವಲ್ಲ. ಹೇಗಿದ್ದ ಕಾಂಗ್ರೆಸ್ ಹೇಗೆ ಬದಲಾಗಿದೆ ಎಂಬ ಬಗ್ಗೆ ಬೇಸರವಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು, ನಾವೇ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಹೇಳುತ್ತಿದ್ದ ಕಾಂಗ್ರೆಸ್ ನಲ್ಲಿ ಹಿಂದೆ ಸಾರಾಯಿ ಕುಡಿಯುವವರು, ಬೀಡಿ ಸೇದುವವರಿಗೆ, ಖಾದಿ ತೊಡುವವರೆಗೂ ಪಕ್ಷದ ಸದಸ್ಯತ್ವ ಕೊಡುತ್ತಿರಲಿಲ್ಲವಂತೆ. ಆದರೆ ಈಗ ಹೆಂಡ ಕುಡಿಯುವ, ಮಾರುವ ಎಲ್ಲರಿಗೂ ಸದಸ್ಯತ್ವ, ಟಿಕೆಟ್ ಸಿಗುತ್ತದೆ ಎಂದರು.
ಲೋಕಸಭಾ ಚುನಾವಣೆ ಬರುತ್ತಿರುವ ಈ ಸಂದರ್ಭದಲ್ಲಿ ಅವರ ಹೇಳಿಕೆಯ ಹಿಂದೆ ಏನೋ ಸಂಚಿದೆ. ಯಾವುದೋ ಅಪರಾಧಕ್ಕೆ ಪ್ರೋತ್ಸಾಹ ನೀಡುವಂತಿದೆ. ಜಿಲ್ಲೆಯಲ್ಲಿ ಏನೋ ದೊಡ್ಡ ಅನಾಹುತ ಆಗಲಿಕ್ಕಿದೆ ಎಂಬ ಭಯ ಕಾಡುತ್ತಿದೆ. ಅನುಮಾನಾಸ್ಪದ ಸಾವಾದರೆ ಮೊದಲು ವೈದ್ಯರನ್ನೇ ವಿಚಾರಣೆಗೆ ಒಳಪಡಿಸಬೇಕು. ಕಾಂಗ್ರೆಸ್, ವೈದ್ಯರು ನೀಡುವ ಆಧಾರ ರಹಿತ, ಸಾಮಾಜಿಕ ಬದ್ಧತೆ ಇಲ್ಲದ ಹೇಳಿಕೆಯನ್ನ ಬಿಜೆಪಿ ಖಂಡಿಸುತ್ತದೆ. ರಾಜ್ಯ ಮಟ್ಟದ ರಾಜಕಾರಣಿಯಾದವರು ಮಾತಾಡುವ ಮೊದಲು ಯೋಚಿಸಬೇಕು. ಇಲ್ಲದಿದ್ದರೆ ಅಪಹಾಸ್ಯಕ್ಕೆ ಗುರಿಯಾಗುತ್ತೀರಿ. ಇದನ್ನೇ ಮುಂದುವರಿಸಿದ್ದಲ್ಲಿ ಬಿಜೆಪಿಯಿಂದ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.