ಅಂಕೋಲಾ: ತಾಲೂಕಿನ ರಾಮನಗುಳಿ ಬಳಿ ಗಂಗಾವಳಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ 25 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು ಸೇತುವೆಯ ಎರಡು ಬದಿಗಳ ರಸ್ತೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ.
ಈ ಸೇತುವೆ ಕಳೆದ ಸರಕಾರದ ಅವಧಿಯಲ್ಲಿ ಅಂದಿನ ಶಾಸಕಿ ರೂಪಾಲಿ ನಾಯ್ಕ ಅವರ ಪರಿಶ್ರಮದಿಂದ ಮಂಜೂರಾತಿಯನ್ನು ಪಡೆದುಕೊಂಡಿತ್ತು. ಇದಕ್ಕೂ ಮೊದಲು ಇಲ್ಲಿ ತೂಗುಸೇತುವೆ ಇತ್ತು. 2019 ರಲ್ಲಿ ಗಂಗಾವಳಿ ನದಿಯ ಪ್ರವಾಹಕ್ಕೆ ತೂಗುಸೇತುವೆ ಕೊಚ್ಚಿಹೋಗಿತ್ತು. ಬಳಿಕ ಇಲ್ಲಿನ ಜನರು ಅನುಭವಿಸುವ ಕಷ್ಟವನ್ನು ಅರಿತ ರೂಪಾಲಿ ಸದನದಲ್ಲಿ ನೆರೆಯಿಂದ ಕ್ಷೇತ್ರದಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಇತ್ತೀಚೆಗೆ ಅನ್ಯ ಕಾರ್ಯದ ನಿಮಿತ್ತ ಆಗಮಿಸಿದ ರೂಪಾಲಿ ನಾಯ್ಕ ರಾಮನಗುಳಿ ಸೇತುವೆ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು ಇದು ನನ್ನ ಕನಸಿನ ಯೋಜನೆಗಳಲ್ಲಿ ಒಂದು. ಸೇತುವೆ ಕಾಮಗಾರಿ ಅಂತಿಮ ಘಟ್ಟವನ್ನು ತಲುಪಿದ್ದು ಇನ್ನು ಕೆಲವೇ ದಿನಗಳಲ್ಲಿ ಸೇತುವೆ ಜನರ ಬಳಕೆಗೆ ಸಿಗಲಿದೆ ಎಂದು ರೂಪಾಲಿ ನಾಯ್ಕ ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ರಾಘು ಹೆಗಡೆ, ರಾಘು ಭಟ್, ನಾರಾಯಣ ಹೆಗಡೆ, ಶಶಾಂಕ ಹೆಗಡೆ, ಆನಂದು ನಾಯ್ಕ ಮತ್ತಿತರರು ಇದ್ದರು.