ಶಿವಮೊಗ್ಗ: ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯದಲ್ಲಿರುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಪುನ: ಜಾರಿಗೆ ತರಲು ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪುನರುಚ್ಛರಿಸಿದರು.
ಅವರು ಭಾನುವಾರ ಶಿವಮೊಗ್ಗದ ಹೊರವಲಯದಲ್ಲಿ ದಿವಂಗತ ಸಿದ್ದಯ್ಯ ಹಿರೇಮಠ್ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಹಳೆ ಪಿಂಚಣಿ ಜಾರಿಗೆ ಒತ್ತಾಯಿಸಿ ಏರ್ಪಡಿಸಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹಳೆ ಪಿಂಚಣಿ ಜಾರಿಗೆ ರಾಜ್ಯದ ಎಲ್ಲ ಕಡೆ ಹೋರಾಟಗಳು ನಡೆಯುತ್ತಿವೆ. 2006ರ ನಂತರ ನೇಮಕ / ಸೇವಾ ಸಕ್ರಮಾತಿಗೊಂಡ ಸಿಬ್ಬಂದಿಗಳಿಗೆ ಹಳೆ ಪಿಂಚಣಿ ಬದಲಾಗಿ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಅವರು ಮತ್ತು ಅವರ ಆಶ್ರಿತ ಕುಟುಂಬಗಳು ಇನ್ನಿಲ್ಲದ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುಮಾರು 149 ದಿನಗಳ ಕಾಲ ಇವರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೂ ಅರಿವಿದೆ. ಚುನಾವಣಾ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿಯೂ ತಾವೇ ಇದ್ದುದರಿಂದ ಈ ಭರವಸೆಯನ್ನು ಈಡೇರಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಅವರು ತಿಳಿಸಿದರು.
ಬರುವ ಎರಡು ವರ್ಷಗಳಲ್ಲಿ ರಾಜ್ಯದ ಶಾಲಾ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಕಾಯೋನ್ಮುಖರಾಗಿದ್ದಾಗಿ ತಿಳಿಸಿದ ಅವರು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಎಲ್ಲ ಮಕ್ಕಳಿಗೂ ಸಮವಸ್ತ್ರ ಕೊಡುವುದಾಗಿ ಹೇಳಿದ ಅವರು ಕೊಟ್ಟ ಭರವಸೆಯನ್ನು ಈಡೇರಿಸುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. 2023ರ ವರೆಗೆ ಅನುದಾನಿತ ಸಂಸ್ಥೆಗಳಲ್ಲಿ ಖಾಲಿಯಾದ ಎಲ್ಲ ಹುದ್ದೆಗಳ ಜೊತೆ ಸಂಗೀತ, ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಮಾವೇಶದಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಮಾಜಿ ಸದಸ್ಯರಾದ ಆಯನೂರು ಮಂಜುನಾಥ ಮಾತನಾಡಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ನೌಕರರ ಬಗ್ಗೆ ಕಾಮಧೇನುವಾಗಿದ್ದರೆ ಅವರ ಮಗನಾದ ಮಧು ಬಂಗಾರಪ್ಪ ಕಾಮಧೇನುವಿನ ಮಗಳು ಸುರಭಿ ಇದ್ದ ಹಾಗೆ. ಹಳೆ ಪಿಂಚಣಿ ಅನಿವಾರ್ಯ. ಅದರ ಭರವಸೆಯ ಮೇಲೆಯೇ ದಶಕಗಳಷ್ಟು ಕಾಲ ಸೇವೆ ಸಲ್ಲಿಸಿರುತ್ತಾರೆ. ಅನುದಾನಿತ ನೌಕರರ ಸಮಸ್ಯೆಯ ಅರಿವು ಅವರಿಗಿದೆ. 2006ರ ನಂತರ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಹಳೆ ಪಿಂಚಣಿ ದೊರೆಯುತ್ತಿರುವಾಗ ಪ್ರಜಾಪ್ರಭುತ್ವದ ಪ್ರಭುಗಳಾದ ಶಿಕ್ಷಕ/ಮತದಾರರಿಗೆ ಹಳೆ ಪಿಂಚಣಿಯನ್ನು ಸಚಿವರು, ಸರ್ಕಾರ ಕೊಡಲಾರರೆ ಎಂದು ಮಾರ್ಮಿಕವಾಗಿ ನುಡಿದರು. ಸರ್ಕಾರ ಆದೇಶ ಹೊರಡಿಸುವಾಗ ನೇಮಕಾತಿ ಅಥವಾ ಸೇವಾ ಸಕ್ರಮಾತಿ ಹೊಂದಿದ ನೌಕರರು ಎಂಬ ಪದವನ್ನೇ ಬಳಸಿ ಆದೇಶ ಹೊರಡಿಸಬೇಕು. ಸರ್ಕಾರ ಶಿಕ್ಷಕರಿಗೆ ಹಳೆ ಪಿಂಚಣಿ ನೀಡದೇ ಇರುವುದು ಅಮಾನವೀಯ ಎಂದು ಜರಿದ ಅವರು ಮುಂದಿನ ಬದುಕಿಗೆ ಹಿಂದಿನ ಬಾಕಿ ಬಿಡಲು ನೌಕರರು ತಯಾರಿರುವಾಗ ಅದನ್ನು ಜಾರಿಗೊಳಿಸಲು ಅಡ್ಡಿಯೇನು ಎಂದು ಪ್ರಶ್ನಿಸಿದರು.
ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ ಮಾತಿಗಿಂತ ಕೆಲಸ ಮುಖ್ಯ. ಅನುದಾನಿತ ನೌಕರರಿಗೆ ಹಳೆ ಪಿಂಚಣೆ ಕೊಡಲೇಬೇಕು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಉಪಾಧ್ಯಕ್ಷರೂ ಆಗಿದ್ದ ಸಚಿವ ಮಧು ಬಂಗಾರಪ್ಪ ಅವರಿಗೆ ಇದು ದೊಡ್ಡ ಕೆಲಸವಲ್ಲ. ಅಲ್ಲದೆ ವೇತನಾನುದಾನ ಕಾಯ್ದೆಗೆ ತಿದ್ದುಪಡಿ ತಂದು ಅನುದಾನಿತ ಶಾಲೆಗಳ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನಿಯೋಜನೆ ಮಾಡುವ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೂ ವಿಮಾ ಯೋಜನೆಯನ್ನು ವಿಸ್ತರಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಹಾಲಿ ಇರುವ ಕೆಲ ಅವೈಜ್ಞಾನಿಕ ನಿಯಮಗಳನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಈ ಹಿಂದಿನ ಸರ್ಕಾರದ ನಿರ್ಲಕ್ಷö್ಯ ಧೋರಣೆಯಿಂದ ಐದು ಜನ ಶಿಕ್ಷಕರು ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳೆರಡೂ ಒಂದೇ ಎಂಬ ಭಾವನೆ ಶಿಕ್ಷಣ ಇಲಾಖೆಯ ಐ.ಎ.ಎಸ್.ಅಧಿಕಾರಿಗಳ ಮನಸ್ಸಿನಲ್ಲಿರಬೇಕು. ಸರ್ಕಾರಿ ಮತ್ತು ಅನುದಾನಿತ ನಡುವೆ ತಾರತಮ್ಯ ನೀತಿ ಅನುಸರಿಸದಂತೆ ಜನಪ್ರತಿನಿಧಿಗಳು ಅಧಿಕಾರಿಗಳ ಕಣ್ತೆರೆಸಬೇಕು. ಯಾವುದೇ ಆದೇಶ ಹೊರಡಿಸುವಾಗ ಕೇವಲ ಸರ್ಕಾರಿ ಶಾಲೆ ಎಂದು ನಮೂದಿಸದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಎಂದೇ ಹೊರಡಿಸಬೇಕು ಎಂದು ಆಗ್ರಹಿಸಿದರು. ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ಹೊರಟ್ಟಿ ಸಮಿತಿಯ ವರದಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅನುದಾನಿತ ನೌಕರರ ಸಮಾವೇಶದ ಸುದ್ದಿ ಮಾಡಲು ತೆರಳಿದ್ದ ಮಾಧ್ಯಮದವರಿಗೇ ಕುಳಿತುಕೊಳ್ಳಲು ಸ್ಥಳಾವಕಾಶ ಸಿಗದೇಹೋದ ಸಂದರ್ಭವೂ ಎದುರಾಯಿತು. ಸಂಘಟಕರ ನಿರೀಕ್ಷೆಗೂ ಮೀರಿ ರಾಜ್ಯದ ಮೂಲೆ ಮೂಲೆಗಳಿಂದ ನಾಲ್ಕು ಸಾವಿರಕ್ಕೂ ಅಧಿಕ ಶಿಕ್ಷಕರು ಆಗಮಿಸಿದ್ದರಿಂದ ಆಡಿಟೋರಿಯಂ ಭರ್ತಿಯಾಗಿ ವೇದಿಕೆಯ ಮುಂಭಾಗದ ಬಾವಿಯಲ್ಲಿಯೂ ಸಭೆಗೆ ಆಗಮಿಸಿದವರು ಕುಳಿತಿದ್ದರು. ಸಂಘಟಕರು ಪತ್ರಕರ್ತರಿಗೇ ಎಂದು ಸ್ಥಳವನ್ನು ಮೀಸಲಿಡದೇ ಹೋಗಿದ್ದೂ ಇದಕ್ಕೆ ಕಾರಣವಾಯಿತು. ಅಲ್ಲಿ ಇಲ್ಲಿ ಹಿಂದೆ ತುದಿಗಾಲಲ್ಲಿ ತಾಸುಗಟ್ಟಲೆ ನಿಂತು ಪತ್ರಕರ್ತರು ಸುದ್ದಿ, ಫೋಟೊ ತೆಗೆದುಕೊಳ್ಳುವ ಸಂದರ್ಭ ಎದುರಾಯಿತು.
ಸಮಾವೇಶದಲ್ಲಿ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಪ್ರೊ.ಎಸ್.ವಿ.ಸಂಕನೂರು, ಸಾಂದರ್ಭಿಕವಾಗಿ ಮಾತನಾಡಿದರು. ವೈ.ಎನ್.ನಾರಾಯಣಸ್ವಾಮಿ, ಚಿದಾನಂದ ಗೌಡ, ಮರಿತಿಬ್ಬೇಗೌಡಮ, ರಘುಪತಿ ಭಟ್, ಹನುಮಂತ ಐರಿಣಿ, ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಎಸ್.ಪಿ.ದಿನೇಶ, ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ ಮೊದಲಾದವರಿದ್ದರು.