ಕಾರವಾರ: ಸಿಎಂ ಟಿಪ್ಪಣಿ ಇದ್ದರೂ ಶಿಕ್ಷಣ ಅಧಿಕಾರಿಗಳು ನೂತನ ಶಿಕ್ಷಕರ ನೇಮಕಾತಿಗೆ ವಿಳಂಬ ಮಾಡುತ್ತಿದ್ದು, ಸಿಎಂ ಟಿಪ್ಪಣಿಗೇ ಬೆಲೆ ಇಲ್ಲದಂತಾಗಿದೆ.
2022-23ನೇ ಸಾಲಿನಲ್ಲಿ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿರುವ ಉತ್ತರ ಕನ್ನಡದ ಸುಮಾರು 250ಕ್ಕೂ ಅಧಿಕ ಅಭ್ಯರ್ಥಿಗಳ ದಾಖಲಾತಿ ಪತ್ರ ಪರಿಶೀಲನೆಯೆಲ್ಲ ಪೂರ್ಣಗೊಂಡಿದ್ದು, ನೇಮಕಾತಿಗೆ ಸಿಂಧುತ್ವ ಪತ್ರದ ಅವಶ್ಯಕತೆ ಇರುವುದಾಗಿ ನೇಮಕಾತಿ ವಿಳಂಬ ಮಾಡಲಾಗುತ್ತಿದೆ. ಸಿಂಧುತ್ವಕ್ಕಾಗಿ ದಾಖಲಾತಿಗಳನ್ನ ಸಲ್ಲಿಸಿದರೂ ಕಳೆದ ಮೂರು ತಿಂಗಳಿನಿಂದ ಅರ್ಜಿಗಳನ್ನ ತಿರಸ್ಕಾರಗೊಳಿಸಲಾಗುತ್ತಿದೆ ಎಂದು ಅಭ್ಯರ್ಥಿಗಳು ಕಾರವಾರದಲ್ಲಿ ಸಚಿವ ಮಂಕಾಳ ವೈದ್ಯರ ಬಳಿ ಅಳಲು ತೋಡಿಕೊಂಡರು.
ಸಿಂಧುತ್ವ ಪತ್ರ ಕಡ್ಡಾಯವಲ್ಲ ಎಂಬ ಸಿಎಂ ಟಿಪ್ಪಣಿ ಇದ್ದರೂ ಅಧಿಕಾರಿಗಳು ಕಡ್ಡಾಯವೆಂದು ನೇಮಕಾತಿ ವಿಳಂಬ ಮಾಡುತ್ತಿರುವ ಬಗ್ಗೆ ಅಭ್ಯರ್ಥಿಗಳು ತಿಳಿಸಿದ್ದು, ಕೂಡಲೇ ಸ್ಥಳದಿಂದಲೇ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಡಿಪಿಎಆರ್ ಗೆ ಕರೆಮಾಡಿ ಸಮಸ್ಯೆ ಪರಿಹಾರಕ್ಕೆ ಸಚಿವ ವೈದ್ಯ ಆಗ್ರಹಿಸಿದರು. ಅಲ್ಲದೇ ಬಿಸಿಎಂ ಅಧಿಕಾರಿಗೆ ಇಂದೇ ಸಮಸ್ಯೆ ಪರಿಹರಿಸಿಕೊಡಲು ಸೂಚಿಸಿದರು.