ಶಿರಸಿ: ಪಿ ಎಸ್ ಕಾಮತ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ನಮ್ಮ ಜಿಲ್ಲೆಯ ಅಭಿವೃದ್ಧಿ ಹೊಂದಲು ಶಿಕ್ಷಣ ಸಂಸ್ಥೆ ಮತ್ತು ಇತರ ಕಾರ್ಯಕ್ರಮದ ಮೂಲಕ ಜಿಲ್ಲೆಯ ಏಳಿಗೆಗೆ ಶ್ರಮಿಸಿದ್ದಾರೆ. ಅವರ ಮೊಮ್ಮಗ ದೇವದತ್ ಕಾಮತ್ ಉತ್ತಮ ವಾಗ್ಮಿಗಳಿಗೆ ಸಹಾಯವಾಗಲೆಂದು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದಾರೆ ಎಂದು ಎಂ ಎಂ ಕಾಲೇಜು ಉಪ ಸಮಿತಿ ಅಧ್ಯಕ್ಷ ಎಸ್. ಕೆ.ಭಾಗವತ್ ನುಡಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಮತ್ತು ದಿ. ಪಿ.ಎಸ್ ಕಾಮತ್ ರವರ ಸ್ಮರಣಾರ್ಥ “ರಾಷ್ಟ್ರೀಯ ಭಾವೈಕ್ಯತೆಗೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ” ಎಂಬ ವಿಷಯದ ಕುರಿತು ಕ್ಲಸ್ಟರ್ ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವದತ್ ಕಾಮತ್ ಕೊರೋನಾ ಸಮಯದಲ್ಲಿ ನಮ್ಮ ಜಿಲ್ಲೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ಹಲವು ತಂಡ ನಿರ್ಮಿಸಿ, ಎಲ್ಲ ಸೌಕರ್ಯಗಳನ್ನು ಒದಗಿಸಿ ಎಲೆಮರೆಕಾಯಿಯಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇಂತಹ ಸ್ಪರ್ಧೆಗಳಿಗೆ ಭಾಗವಹಿಸುವುದರಿಂದ ನಮ್ಮ ಜೀವನದ ಕೆಲಸ ಕಾರ್ಯಗಳಲ್ಲಿ ತೊಡಗುವ ಮನಸ್ಥಿತಿ ಬೆಳೆಯುತ್ತದೆ. ಇಂದಿನ ಸ್ಪರ್ಧೆ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯವಾದ್ದರಿಂದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಚರ್ಚಾಸ್ಪರ್ಧೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸನ್ನ ಮರಾಠಿ ಪ್ರಥಮ ಸ್ಥಾನ ಪಡೆದರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಾಪುರದ ಮೇಘನ ನಾಯಕ್ ದ್ವಿತೀಯ ಸ್ಥಾನ ಪಡೆದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಟಿಎಸ್ ಹಳೆಮನೆ ಸ್ವಾಗತಿಸಿ, ಪ್ರಾಸ್ತಾವಿಸಿ ದಿ. ಪಿ.ಎಸ್ ಕಾಮತ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಚರ್ಚಾ ಸ್ಪರ್ಧೆಗೆ ಎಷ್ಟು ಜನ ಭಾಗವಹಿಸುತ್ತಾರೆ ಎಂಬುದು ಮುಖ್ಯವಲ್ಲ ಆದರೆ ಎಷ್ಟು ಆಸಕ್ತಿ ಇರುತ್ತದೆ ಎಂಬುದು ಮುಖ್ಯ ಎಂದರು.
ನಿರ್ಣಾಯಕರಾಗಿ ಪ್ರೀತಮ್ ಬಾರ್ಕೂರ್ ಹಾಗೂ ಭವ್ಯಾ ಹೆಗಡೆ ಆಗಮಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎನ್. ಭಟ್ ವಂದಿಸಿದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಿ. ಟಿ. ಭಟ್ ನಿರೂಪಿಸಿದರು .