ಕುಮಟಾ: ಪುಟ್ಟ ಬಾಲಕಿಯೋರ್ವಳು ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ ವಾಲಗಳ್ಳಿ ಗ್ರಾಪಂ ವ್ಯಾಪ್ತಿಯ ಸೋಕನಮಕ್ಕಿಯಲ್ಲಿ ನಡೆದಿದೆ.
ತಾಲೂಕಿನ ಹಿರೇಗುತ್ತಿಯ ನಿವಾಸಿ ಧೃತಿ ನಾರಾಯಣ ಪಟಗಾರ ಎಂಬಾಕೆ ಮೃತ ಪಟ್ಟಿರುವ ಐದು ವರ್ಷದ ಪುಟ್ಟ ಬಾಲಕಿ. ತಾಯಿ ಬಾಳಂತನದಲ್ಲಿ ಇರುವ ಕಾರಣ ತನ್ನ ತಾಯಿಯ ಅಕ್ಕನ ಮನೆಯಾದ ಕುಮಟಾ ತಾಲೂಕಿನ ಶೋಕನಮಕ್ಕಿಗೆ ಬಂದಿದ್ದಳು. ಧೃತಿ ಬುಧವಾರ ಸಂಜೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದ ಸಂದರ್ಭದಲ್ಲಿ ಆಕೆಯ ತಲೆ ಭಾಗಕ್ಕೆ ಗಂಭೀರ ಗಾಯವಾಗಿದೆ.
ಹಣೆಗೆ ಬಿದ್ದ ಒಳಪೆಟ್ಟಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಕಿದ್ದ ಆಕೆಯನ್ನು ಕುಟುಂಬಸ್ತರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವವನ್ನು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬಾಲಕಿಯ ಮೃತದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.