ಹೊನ್ನಾವರ: ಅತಿಯಾದ ಮೊಬೈಲ್ ಬಳಕೆಯಿಂದ ಚಿಕ್ಕ ವಯಸ್ಸಿನಲ್ಲೆ ಮಕ್ಕಳ ಕಣ್ಣುಗಳು ಅಪಾಯಕ್ಕೆ ಒಳಗಾಗುತ್ತಿದೆ. ಕಣ್ಣುನೋವು, ನಿದ್ರಾಹೀನತೆ, ತಲೆನೋವು,ಮಾನಸಿಕ ಖಿನ್ನತೆ ಮೊದಲಾದ ಸಮಸ್ಯೆಗಳು ಹದಿಹರೆಯದವವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ತಾಲೂಕ ಆಸ್ಪತ್ರೆಯ ಐಸಿಟಿಸಿ ಆಪ್ತಸಮಾಲೋಚಕ ವಿನಾಯಕ ಹೇಳಿದರು.
ಕಡತೋಕಾದ ಜನತಾ ವಿದ್ಯಾಲಯದಲ್ಲಿ ಹದಿಹರೆಯದ ಆರೋಗ್ಯ ಮತ್ತು ಮೊಬೈಲ್ ದುಷ್ಪರಿಣಾಂಗಳ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ದಿನವೊಂದಕ್ಕೆ ನಾಲ್ಕು ತಾಸಿಗಿಂತಲೂ ಹೆಚ್ಚು ಮೊಬೈಲ್ ಬಳಸುತ್ತಿದ್ದರೆ ಅಂತವರು ಮೊಬೈಲ್ ಚಟಕ್ಕೆ ದಾಸರಾಗಿದ್ದಾರೆ ಎಂದು ಅರ್ಥ. ಹದಿಹರೆಯದವರು, ಚಿಕ್ಕ ಮಕ್ಕಳು, ಗರ್ಭಿಣಿ ಮಹಿಳೆಯರು ಮೊಬೈಲಿನಿಂದ ದೂರ ಇರಬೇಕು. ಹದಿಹರೆಯದವರಲ್ಲಿ ಮಾನಸಿಕ ವಿಕಸನ ಆಗುತ್ತಿರುವ ಹಂತದಲ್ಲಿರುವದರಿಂದ ಮೊಬೈಲ್ ಅತಿಯಾದ ಬಳಕೆ ಅವರ ಮೆದುಳಿನ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ ಎಂದರು.
ಕಣ್ಣುಗಳು ಆಯಾಸಕ್ಕೆ ಒಳಗಾಗಿ ಅಪಾಯಕ್ಕೆ ಈಡಾಗುತ್ತದೆ. ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಗೇಮ್‌ಗಳು ಹದಿಹರೆಯದವರನ್ನು ಅಪಾಯಕ್ಕೆ ದೂಡುತ್ತಿದೆ. ಇದರಿಂದ ಅವರ ವ್ಯಕ್ತಿತ್ವ, ವಿದ್ಯಾಭ್ಯಾಸದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತಿದೆ.ಹದಿಹರೆಯದವರು ಮೊಬೈಲ್ ಬಳಕೆ ಬಗ್ಗೆ ಸ್ವಯಂ ನಿಯಂತ್ರಣ ಹೇರಿಕೊಂಡು ಅದರಿಂದ ಹೊರಬರಬೇಕು. ಮೊಬೈಲ್ ಬಳಕೆ ಬಗ್ಗೆ ವೇಳಾಮಿತಿ ಹಾಕಿಕೊಂಡು ಅದರಿಂದ ದೂರ ಇರಬಹುದು.ಮೊಬೈಲ್ ಬಳಕೆ ಬಗ್ಗೆ ಎಚ್ಚರವಹಿಸದಿದ್ದರೆ ಕಣ್ಣು ಅಪಾಯಕ್ಕೆ ಒಳಗಾಗಿ ನಮ್ಮ ಜೀವನ ಅಂಧಕಾರಕ್ಕೆ ಒಳಗಾಗುವುದು. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆರೋಗ್ಯ ನಿರೀಕ್ಷಕ ಅಧಿಕಾರಿ ಆನಂದ ಶೇಟ್ ಕಾರ್ಯಗಾರದಲ್ಲಿ ಹಾಜರಿದ್ದು ಸಹಕರಿಸಿದರು. ಶಾಲಾ ಮುಖ್ಯಾಧ್ಯಾಪಕ ದಿನೇಶ ವೈದ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು. ಹೈಸ್ಕೂಲಿನ ವಿದ್ಯಾರ್ಥಿಗಳು, ಶಿಕ್ಷಕ ವರ್ಗ ಕಾರ್ಯಗಾರದಲ್ಲಿ ಹಾಜರಿದ್ದರು.