ದಾಂಡೇಲಿ: ನಗರದ ಹಳಿಯಾಳ ರಸ್ತೆ ಬದಿ ಪುಟ್ಪಾತ್’ನಲ್ಲಿದ್ದ ಗೂಡಂಗಡಿಗಳನ್ನು ತಾಲ್ಲೂಕಾಡಳಿತ ಮತ್ತು ನಗರಾಡಳಿತದ ಜಂಟಿ ನೇತೃತ್ವ ಹಾಗೂ ಪೊಲೀಸ್ ಇಲಾಖೆಯ ಸಹಕಾರದಲ್ಲಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಭಾನುವಾರ ಬೆಳಿಗ್ಗೆ ನಡೆಯಿತು.
ಹಳಿಯಾಳ ರಸ್ತೆಯ ಪುಟ್ಪಾತ್ ನಲಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೆ ಕೆಲವು ಗೂಡಂಗಡಿದಾರರು ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದರು. ಓರ್ವ ಗೂಡಂಗಡಿದಾರ ಅಧಿಕಾರಿಗಳ ಮೇಲೆರಗಿ ಹೋಗಿ ಆನಂತರ ಪೊಲೀಸರು ಮಧ್ಯ ಪ್ರವೇಶ ಮಾಡಿ ಆತನನ್ನು ತರಾಟೆಗೆ ತೆಗೆದುಕೊಂಡರು.
ಕೆಲವು ಗೂಡಂಗಡಿದಾರರು ತಾವೇ ಸ್ವತ: ತೆರವಿಗೆ ಮುಂದಾದರು. ಬಹುತೇಕ ಗೂಡಂಗಡಿಗಳನ್ನು ನಗರ ಸಭೆಯ ಪೌರಕಾರ್ಮಿಕರ ಮೂಲಕವೆ ತೆರವುಗೊಳಿಸಲಾಯಿತು. ಆನಂತರ ಪಟೇಲ್ ವೃತ್ತದ ಕೆಳಗೆ ರಸ್ತೆ ಬದಿ ನಿಲ್ಲಿಸಲಾಗಿದ್ದ ಗುಜರಿ ವಾಹನಗಳನ್ನು ತೆರವುಗೊಳಿಸಲಾಯ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ನಗರ ಸಭಾ ಸದಸ್ಯೆ ಪ್ರೀತಿ ನಾಯರ್, ಪಿಎಸೈಗಳಾದ ಐ.ಆರ್.ಗಡ್ಡೇಕರ್, ಯಲ್ಲಪ್ಪ.ಎಸ್, ಆರ್.ಟಿ.ಓ ನಿರೀಕ್ಷಕ ಎನ್.ಜಿ.ಪಠಾಣ್, ಎಎಸೈಗಳಾದ ನಾರಾಯಣ ರಾಥೋಡ್, ಬಸವರಾಜ ಒಕ್ಕುಂದ, ನಗರ ಸಭೆಯ ಅಧಿಕಾರಿಗಳಾದ ಬಾಲು ಗವಾಸ್, ಶುಭಂ ರಾಯ್ಕರ್, ವಿಲಾಸ್ ದೇವಕರ್ ಹಾಗೂ ಇನ್ನಿತರ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.