ಕಾರವಾರ: ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿಯನ್ನ ಶೀಘ್ರದಲ್ಲಿ ಕೊಡುವಂತೆ ಜಿಲ್ಲಾ ಮರಳು ಕಾರ್ಮಿಕರ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಲಾಯಿತು.
ಜಿಲ್ಲೆಯ ಕರಾವಳಿ ನಿಯಂತ್ರಣವಲಯ ಪ್ರದೇಶದಲ್ಲಿ ಬರುವ ನಾಲ್ಕು ನದಿ ಪಾತ್ರದಲ್ಲಿ ಉತ್ಪತ್ತಿಯಾದ ಮರಳು ದಿಬ್ಬಗಳಿಂದ ಮರಳನ್ನು ತೆರವು ಗೊಳಸುವ ಬಗ್ಗೆ ಜಿಲ್ಲಾಧಿಕಾರಿಯ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ ಸಭೆಯಲ್ಲಿ ಮಂಡಿನೆ ಮಾಡಿ ಸಭೆಯ ನಿರ್ಣಯದಂತೆ ಒಟ್ಟು 19 ಮರಳು ದಿಬ್ಬಗಳನ್ನು ತೆರವುಗೊಳಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಶಿಫಾರಸ್ಸನ್ನು ಮಾಡಲಾಗಿತ್ತು.
ಈ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಜಿಲ್ಲೆಯ ನಾಲ್ಕು ನದಿಗಳಲ್ಲಿ ಒಟ್ಟು 19 ಮರಳು ದಿಬ್ಬಗಳನ್ನು ತೆರವು ಗೋಳಿಸಲು ಸೆ. 2ರಂದು ನಿರಾಕ್ಷೇಪಣಾ ಪತ್ರವನ್ನು ನೀಡಲಾಗಿದೆ. ಆದರೆ ನಿರಾಕ್ಷೇಪಣಾ ಪತ್ರವನ್ನು ನೀಡಿ ಒಂದುವರೆ ತಿಂಗಳು ಕಳೆದರೂ ಕೂಡಾ ಜಿಲ್ಲಾ ಮರಳು ಉಸ್ತುವಾರಿ ಸಭೆಯನ್ನು ಕರೆದು ಯಾವುದೇ ನಿರ್ಣಯವನ್ನು ತೆಗೆದುಕೊಂಡಿರುವುದಿಲ್ಲ. ಇದರಿಂದ ಇದೇ ಕಸಬನ್ನು ನಂಬಿಕೊಂಡಿರುವವರಿಗೆ ತುಂಬಾ ತೊಂದರೆಯಾಗಿದೆ.
ಆದಷ್ಟು ಬೇಗ ಮರಳು ಉಸ್ತುವಾರಿ ಸಮಿತಿಯ ಸಭೆಯನ್ನು ಕರೆದು ಮರಳು ದಿಬ್ಬಗಳನ್ನು ತೆರವುಗೊಳಿಸಿ ಸಾಗಾಟ ಮಾಡಲು ಸೂಕ್ತ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳ ಬಳಿ ಸಂಘಟನೆಯ ಸದಸ್ಯರು ಒತ್ತಾಯಿಸಿದ್ದಾರೆ.