ಕಾರವಾರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರರ ಭಾವಚಿತ್ರಕ್ಕೆ ಅಪಮಾನ ಮಾಡಿದವರಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಜೈಭೀಮ್ ಮಹಾರ್ ಜನಸೇವಾ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಬರುವ ಪಂಚತಾರಾ ಹೋಟೆಲ್ ಹತ್ತಿರ ರಿಕ್ಷಾ ಸ್ಟ್ಯಾಂಡ್ ನಿರ್ಮಾಣ ಮಾಡುವ ಕುರಿತು ಡಾ.ಅಂಬೇಡ್ಕರರ ನಾಮಫಲಕವನ್ನು ಅಳವಡಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಇದನ್ನು ವಿರೋಧಿಸಿ ಅಂಬೇಡ್ಕರರ ನಾಮಫಲಕವನ್ನು ತೆರವುಗೊಳಿಸಿದ್ದಾರೆ. ಆ ಮೂಲಕ ಬಾಬಾ ಸಾಹೇಬ ಅಂಬೇಡ್ಕರರನ್ನು ಅಪಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.
ಅಂಬೇಡ್ಕರರ ಭಾವಚಿತ್ರವಿದ್ದ ನಾಮಫಲಕವನ್ನು ಪೊಲೀಸರ ಸಮ್ಮುಖದಲ್ಲೇ ನೂಕಿ, ತಳ್ಳಾಡಿ ಕಿತ್ತು ನೆಲಕ್ಕೆ ಕೆಡವಿ, ಡಾ.ಅಂಬೇಡ್ಕರರಿಗೆ ಅಪಮಾನ ಮಾಡಿದ್ದಾರೆ. ಅಂಬೇಡ್ಕರರ ಭಾವಚಿತ್ರವನ್ನು ಹಚ್ಚಿರುವ ವಿಷಯ ತಿಳಿದು ಅದನ್ನು ತೆರವುಗೊಳಿಸಿದ್ದು ಖಂಡನೀಯವಾಗಿದೆ. ಈ ಬಗ್ಗೆ ಗಲಾಟೆ ಮಾಡಿ ಶಾಂತತಾಭಂಗ ಉಂಟುಮಾಡಿದ 35 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಗುಂಪು ಘರ್ಷಣೆಯ ಬಗ್ಗೆ ಮಾತ್ರ ಉಲ್ಲೇಖವಿದ್ದು, ಅಂಬೇಡ್ಕರರ ನಾಮಫಲಕ ತೆರವುಗೊಳಿಸಿದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ದೂರಿದ್ದಾರೆ.
ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಈ ಬಗ್ಗೆ ನಾವು ಅ.15ರಂದು ದೂರು ನೀಡಿದ್ದು, ಈ ಬಗ್ಗೆ ಯಾವುದೇ ಸ್ವೀಕೃತಿ ಪ್ರತಿ ಕೂಡ ಇನ್ನೂ ತನಕ ನೀಡಿಲ್ಲ. ಆದ್ದರಿಂದ ಡಾ.ಅಂಬೇಡ್ಕರರ ಭಾವಚಿತ್ರಕ್ಕೆ ಅಪಮಾನ ಮಾಡಿ, ಬಡಶೋಷಿತ ವರ್ಗದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಜನರ ಭಾವನೆಗೆ ಅಪಮಾನ ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.