ಹಳಿಯಾಳ: ಪ್ರಾಯೋಗಿಕ ಜ್ಞಾನದ ಉನ್ನತೀಕರಣಕ್ಕಾಗಿ ಕೆಎಲ್‌ಎಸ್ ವಿಟಿಐಟಿ ಮಹಾವಿದ್ಯಾಲಯದ ಸಿವಿಲ್ ಮತ್ತು ಎಲೆಕ್ಟ್ರಿಕಲ್ ವಿದ್ಯಾರ್ಥಿಗಳು ರೈಲು ನಿಲ್ದಾಣ ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿ ವೀಕ್ಷಿಸಿದರು.
ಸಿವಿಲ್ ವಿಭಾಗದ ಕೊನೆಯ ವರ್ಷದ 45 ವಿದ್ಯಾರ್ಥಿಗಳು ಪ್ರೊ.ಹರ್ಷ ಜಾಧವ್ ಅವರ ಮಾರ್ಗದರ್ಶನದಲ್ಲಿ ಅ.6ರಂದು ಅಳ್ನಾವರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು. ರೈಲು ನಿಲ್ದಾಣದ ಮುಖ್ಯ ಅಧಿಕಾರಿ ರಾಕೇಶ್, ರೈಲು ಮಾರ್ಗ ನಿರ್ಮಾಣ, ಮಾರ್ಗ ನಿರ್ವಹಣೆ ಹಾಗೂ ಲೋಪದೋಷಗಳ ಪರಿಹರಿಸುವ ಕುರಿತು ಮಾಹಿತಿ ನೀಡಿದರು. ನ್ಯಾರೋ ಗೇಜ್, ಬ್ರಾಡ್ ಗೇಜ್ ಹಾಗೂ ರೈಲು ಸಂಚಾರದ ದಟ್ಟಣೆಯನ್ನು ನಿರ್ವಹಿಸುವ ಪರಿಯನ್ನು ವಿವರಿಸಿದರು.
ಎಲೆಕ್ಟ್ರಿಕಲ್ ವಿಭಾಗದ ಕೊನೆಯ ವರ್ಷದ 32 ವಿದ್ಯಾರ್ಥಿಗಳು ಪ್ರೊ. ಸುಬ್ರಮಣ್ಯ ಹೆಗಡೆಯವರೊಂದಿಗೆ ಕದ್ರಾದಲ್ಲಿರುವ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದಾಗ ಎಲೆಕ್ಟ್ರಿಕಲ್ ವಿಭಾಗದ ಮೇಲ್ವಿಚಾರಕ ಶ್ರೀನಿವಾಸ್, ಪ್ರಚ್ಛನ್ನ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಿ ನೀರಿನಿಂದ ವಿದ್ಯುತ್ ತಯಾರಿಸುವ ವಿಧಾನವನ್ನು ಸಂಪೂರ್ಣವಾಗಿ ವಿವರಿಸಿದರು. ಜನರೇಟರ್, ಜಲಚಕ್ರ, ವಿದ್ಯುತ್ ಪರಿವರ್ತಕ ಮುಂತಾದ ಉಪಕರಣಗಳು ಕಾರ್ಯನಿರ್ವಹಿಸುವ ವಿಧಾನವನ್ನು ತಿಳಿಸಿದರು.
ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಆಶಿಕ್ ಬಳ್ಳಾರಿ ಮತ್ತು ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ಅಲ್ಲಮ್ಮ ಪ್ರಭು ಕೊಳಕಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡುವ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವಿದ್ಯಾರ್ಥಿಗಳಿಗೆ ಭಾರತೀಯ ರೈಲು ಸೇವೆ ಮತ್ತು ವಿದ್ಯುತ್ ಉತ್ಪಾದನಾ ಘಟಕವು ಕಾರ್ಯನಿರ್ವಹಿಸುವ ವಿಧಾನವನ್ನು ತಿಳಿದುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಪ್ರಾಚಾರ್ಯ ಡಾ.ವಿ.ಎ. ಕುಲಕರ್ಣಿ ತಿಳಿಸಿದ್ದಾರೆ.