ಶಿರಸಿ: ವಿದ್ಯಾವಂತರು ಪಟ್ಟಣ ಸೇರುತ್ತಿರುವ ಪರಿಣಾಮ ಹಾಗೂ ಬರಗಾಲ ಪರಿಸ್ಥಿತಿಯಿಂದಾಗಿ ಹೈನುಗಾರಿಕೆ ಕಡಿಮೆಯಾಗುತ್ತಿದೆ. ಸರಕಾರದ ಹೈನುಗಾರಿಕೆಯ ಉತೇಜನಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ರೈತರು ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಹೇಳಿದರು.
ಅವರು ಒಕ್ಕೂಟದ ಶಿರಸಿಯ ಅಗಸೇಬಾಗಿಲಿನಲ್ಲಿರುವ ಕಚೇರಿಯಲ್ಲಿ ವಿವಿಧ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡುತ್ತಿದ್ದರು. ಸರಕಾರ ಹಾಗೂ ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ರೈತರು ಹೈನುಗಾರಿಕೆಯಿಂದ ವಿಮುಖರಾಗದೇ ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆ ಮಾಡುವಂತಾಗಬೇಕು ಎಂದರು. ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಪೂರೈಸುತ್ತಿರುವ ರೈತರ ಜಾನುವಾರುಗಳಿಗೆ ವಿಮೆ ಭರಿಸುವಲ್ಲಿ ಸಬ್ಸಿಡಿ ನೀಡಲಾಗುತ್ತಿದೆ. ಈಗ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ಆಕಳುಗಳ ಖರೀದಿಗೆ ರೈತರಿಗೆ ಧನ ಸಹಾಯದ ನೆರವು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. ಹಾಲು ಸಂಘಗಳಲ್ಲಿ ಹಾಲು ಪೂರೈಸುವ ಸದಸ್ಯರುಗಳು ತಮ್ಮ ವ್ಯಾಪ್ತಿಯ ಹಾಲು ಸಂಘಗಳಲ್ಲಿ ರೂ.200/- ಗಳನ್ನು ಪಾವತಿಸಿ ತಪ್ಪದೇ ಕಲ್ಯಾಣ ಸಂಘದ ಸದಸ್ಯರಾಗಿ ಹೆಚ್ಚಿನ ಹಾಲು ಉತ್ಪಾದನೆ ಮಾಡುವುದರ ಜೊತೆಗೆ ಕಲ್ಯಾಣ ಸಂಘದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ಈ ಮೂಲಕ ಅವರು ಕರೆ ನೀಡಿದರು.
ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ವತಿಯಿಂದ ಕಲ್ಯಾಣ ಸಂಘದ ಸದಸ್ಯರುಗಳಾಗಿದ್ದ ಕಾನಗೋಡ ಹಾಲು ಸಂಘದ ವೆಂಕಟ್ರಮಣ ಗಣಪಾ ಗೌಡ, ಧೋರಣಗಿರಿ ಹಾಲು ಸಂಘದ ಅನಂತ ಮಹಾದೇವಪ್ಪ ಭಟ್ ಇವರುಗಳು ಸ್ವಾಭಾವಿಕ ಮರಣ ಹೊಂದಿದ ಕಾರಣ ಇವರ ವಾರಸುದಾರರಿಗೆ ತಲಾ ರೂ.10,000/-, ಕಡಬಾಳ ಹಾಲು ಸಂಘದ ಅನಸೂಯಾ ಅನಂತ ಹೆಗಡೆ, ಗುಡ್ನಾಪುರ ಹಾಲು ಸಂಘದ ಪ್ರೇಮಲತಾ ಯೋಗೇಂದ್ರ ನಾಯ್ಕ ಇವರು ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ತಲಾ ರೂ. ರೂ.5,000/-, ಮೊತ್ತದ ಚೆಕ್ಗಳನ್ನು ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ವಿಸ್ತರಣಾಧಿಕಾರಿ ಪ್ರಕಾಶ ಕೆ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕ ಅಭಿಷೇಕ ನಾಯ್ಕ, ಜಯಂತ ಪಟಗಾರ ಹಾಗೂ ಕಲ್ಯಾಣ ಸಂಘದ ಫಲಾನುಭವಿಗಳು ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.